ಕ್ರೀಡಾಕೂಟಗಳು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೆಚ್ಚು ಉಪಕಾರಿ
ವಿಜಯಪುರ: ಕ್ರೀಡೆಗಳು, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಹೆಚ್ಚು ಉಪಕಾರಿಯಾಗುತ್ತವೆ. ಆದ್ದರಿಂದ ಪಠ್ಯಚಟುವಟಿಕೆಗಳ ಜೊತೆಗೆ, ಪಠ್ಯೇತರ ಚಟುವಟಿಕೆಗಳ ಕಡೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರೂಬಿ ಆಂಗ್ಲ ಶಾಲೆಯ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು, ಕೇವಲ ಪಠ್ಯಪುಸ್ತಕಗಳಲ್ಲಿ ಕಲಿಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು, ಮೊಬೈಲ್ ಮೇಲಿನ ವ್ಯಾಮೋಹವನ್ನು ಬಿಡಿಸಬೇಕು. ದೇಶೀಯ ಕ್ರೀಡೆಗಳಿಗೂ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.
ರೂಬಿ ಆಂಗ್ಲ ಶಾಲೆಯ ಮುಖ್ಯಶಿಕ್ಷಕಿ ನಿಖತ್ ಸಲ್ಮಾ ಮಾತನಾಡಿ, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು, ಮಾನಸಿಕವಾಗಿ ಶಕ್ತಿಯುತರಾಗುವುದರ ಜೊತೆಗೆ, ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದಕ್ಕೆ ಹೆಚ್ಚು ಸಹಕಾರಿಯಾಗುತ್ತವೆ. ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅವರನ್ನು ಸದೃಢ ಪ್ರಜೆಗಳನ್ನಾಗಿ ರೂಪಿಸಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ, ಮಕ್ಕಳು, ಪರೀಕ್ಷೆಗಳಲ್ಲಿ 100 ಕ್ಕೆ 100 ಅಂಕಗಳು ಗಳಿಸಿಕೊಳ್ಳುವುದು ಉತ್ತಮ ಸಾಧನೆಯಾಗುವುದಿಲ್ಲ. ಅದರ ಜೊತೆಗೆ, ಅವರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಬೇಕು. ಶಿಕ್ಷಣ ಎಷ್ಟು ಪ್ರಾಮುಖ್ಯವೋ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಸಹಾ ಅಷ್ಟೇ ಪ್ರಾಮುಖ್ಯವಾಗಿದೆ. ಈ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಹೆಚ್ಚಿನ ಗಮನಹರಿಸಬೇಕಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅವರಲ್ಲಿ ರೂಢಿಸಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಅವರಿಗೆ ಅರಿವು ಮೂಡಿಸಬೇಕಿದೆ ಎಂದರು.
ರೂಬಿ ಆಂಗ್ಲ ಶಾಲೆಯ ಕಾರ್ಯದರ್ಶಿ ಸೈಯದ್ ರಫಿಕ್ ಅಹಮದ್ ಮಾತನಾಡಿ, ವಿದ್ಯಾರ್ಥಿಗಳು, ಶೈಕ್ಷಣಿಕ ಪ್ರಗತಿಯಿಂದ ಮಾತ್ರವೇ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡಾಕೂಟಗಳು ಸಹಾ ಶೈಕ್ಷಣಿಕ ಜೀವನದ ಒಂದು ಭಾಗವಾಗಿದ್ದು, ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಮಕ್ಕಳಲ್ಲಿ ಅಡಗಿರುವ ಕ್ರೀಡಾಪ್ರತಿಭೆಗಳನ್ನು ಹೊರತೆಗೆಯಲು ಸಾಧ್ಯವಾಗುತ್ತದೆ ಎಂದರು.
ಶಾಲೆಯ ವಿದ್ಯಾರ್ಥಿಗಳಿಂದ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಹಿಡಿದು ಮ್ಯಾರಾಥಾನ್ ನಡೆಸಿದರು. ಶಾಲಾ ಶಿಕ್ಷಕರು, ಪೋಷಕರು ಹಾಜರಿದ್ದರು.





