ಚಳಿಯ ವಾತಾವರಣದ ಪ್ರಭಾವ, ಮಾಂಸದ ಬೆಲೆಗಳು ದುಬಾರಿ. ಗ್ರಾಹಕರು ಹೈರಾಣು
ವಿಜಯಪುರ: ರಾಜ್ಯದಲ್ಲಿ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ, ಕೋಳಿ ಸಾಕಾಣಿಕೆ ಹಾಗೂ ಕುರಿ ಸಾಕಾಣಿಕೆ ಮೇಲೆ ನೇರ ಪರಿಣಾಮ ಬೀರುತ್ತಿರುವ ಕಾರಣ, ಕುರಿ, ಮೇಕೆ, ಕೋಳಿ ಮಾಂಸದ ಬೆಲೆಗಳು ಏರಿಕೆಯಾಗಿದ್ದು, ಗ್ರಾಹಕರ ಕೈ ಸುಡುತ್ತಿದ್ದು, ಮಾಂಸ ಪ್ರಿಯರಿಗೆ ನಿರಾಸೆ ಮೂಡಿಸಿದೆ.
ಚಳಿಗಾಲದ ಕಾರಣ, ಪ್ರತಿನಿತ್ಯ ಬೆಳಗಿನ ಜಾವ 3 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೂ ಬೀಳುತ್ತಿರುವ ಮಂಜಿನ ಪರಿಣಾಮ, ವಾತಾವರಣವು ತಂಪಾಗುತ್ತಿರುವುದ ಜೊತೆಗೆ, ಶೀತವಾತಾವರಣ ನಿರ್ಮಾಣವಾಗುತ್ತಿದ್ದು, ಕೋಳಿ ಸಾಕಾಣಿಕೆ ಫಾರಂಗಳಲ್ಲಿ, ಸಾಕಾಣಿಕೆಯಾಗುತ್ತಿರುವ ಕೋಳಿಗಳ ಬೆಳವಣಿಗೆ ಕುಂಠಿತವಾಗಿರುವುದರ ಜೊತೆಗೆ, ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುತ್ತಿಲ್ಲದ ಕಾರಣ, ಮಾರುಕಟ್ಟೆಗೆ ಬರುವ ಕೋಳಿಗಳ ಆವಕ ಪ್ರಮಾಣ ಕುಸಿತವಾಗಿರುವುದರಿಂದ ಸಣ್ಣ ಬಾಯ್ಲರ್ ಕೋಳಿ ಪ್ರತಿ ಕೆ.ಜಿ.ಗೆ 260 ರೂಪಾಯಿ, ದೊಡ್ಡ ಬಾಯ್ಲರ್ ಕೋಳಿ 280 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಗ್ರಾಹಕರು ತಿಳಿಸಿದ್ದಾರೆ.
ಕುರಿ, ಮೇಕೆ ಸಾಗಾಣಿಕೆಗೂ ಪೆಟ್ಟು: ಚಳಿಗಾಲದಲ್ಲಿ, ರೈತರು, ಕುರಿ, ಮೇಕೆಗಳಿಗೆ ಹಸಿರು ಮೇವು ನೀಡುವುದರಿಂದ ಕುರಿ ಮತ್ತು ಮೇಕೆಗಳಲ್ಲಿ ಉತ್ತಮ ಇಳುವರಿ ಬರುತ್ತಿಲ್ಲ. 20 ಕೆ.ಜಿ. ತೂಗಬೇಕಾಗಿರುವ ಕುರಿ, 18 ಕೆ.ಜಿಯಷ್ಟೆ ತೂಗುತ್ತಿದೆ. ಚರ್ಮಗಳಿಗೂ ಬೆಲೆಯಿಲ್ಲದಂತಾಗಿದೆ. ಮೇಕೆಗಳ ಸಾಕಾಣಿಕೆ ತೀರಾ ಇಳಿಮುಖವಾಗಿರುವುದರಿಂದ ಮಧುಮೇಹ, ಪಾಶ್ವವಾಯುವಿನಂತಹ ರೋಗಗಳಿಗೆ ತುತ್ತಾಗಿರುವ ರೋಗಿಗಳಿಗೆ ಅಗತ್ಯವಾಗಿರುವ ಮೇಕೆ ಮಾಂಸ ಸಿಗುತ್ತಿಲ್ಲ. ಕುರಿ ಹಾಗೂ ಮೇಕೆ ಮಾಂಸದ ದರಗಳಲ್ಲಿ ವ್ಯತ್ಯಾಸವಿಲ್ಲದಿದ್ದರೂ, 700 ರೂಪಾಯಿಗೆ ಮಾರಾಟವಾಗುತ್ತಿದ್ದ 1 ಕೆ.ಜಿ.ಮಾಂಸ, 750 ರೂಪಾಯಿಗೆ ಏರಿಕೆಯಾಗಿರುವುದು ಮಾಂಸ ಪ್ರಿಯರಲ್ಲಿ ಆತಂಕವನ್ನುಂಟು ಮಾಡುತ್ತಿದೆ.
ಕ್ರಿಸ್ಮಸ್ ಗೆ ತೊಡಕು: ಕ್ರಿಸ್ಮಸ್ ಹಬ್ಬವು ಕೇವಲ ಒಂದು ವಾರ ಬಾಕಿ ಇರುವಾಗಲೇ ಮಾಂಸದ ದರ ಏರಿಕೆಯಾಗಿರುವುದು, ಹಬ್ಬ ಆಚರಣೆ ಮಾಡುವ ಭಕ್ತರನ್ನು ಚಿಂತೆಗೀಡು ಮಾಡುತ್ತಿದೆ. ಸಹಜವಾಗಿ ಕ್ರಿಸ್ಮಸ್ ಹಬ್ಬದಂದು, ಬಹುತೇಕ್ ಚರ್ಚ್ ಗಳು, ಭಕ್ತರ ಮನೆಗಳಲ್ಲಿ ಮಾಂಸಾಹಾರ, ಮತ್ತು ವಿವಿಧ ಖಾದ್ಯಗಳನ್ನು ತಯಾರಿಸುವುದು ರೂಢಿಯಲ್ಲಿದ್ದು, ಈ ಬಾರಿ ಮಾಂಸದ ಬೆಲೆ ಏರಿಕೆಯಾಗಿರುವುದರಿಂದ ಖರೀದಿಯ ಪ್ರಮಾಣ ಕಡಿಮೆಯಾಗಬಹುದು ಎಂದು ಗ್ರಾಹಕ ನಿರಂಜನ್ ಹೇಳಿದರು.
————————————————————————
ಬಯಲಿನಲ್ಲಿ ಸುತ್ತಾಡಿ ಮೇಯುವಂತಹ, ಒಣಗಿದ ಆಹಾರ ತಿನ್ನುವಂತಹ ಕುರಿ, ಮೇಕೆಗಳು, ಉತ್ತಮ ಇಳುವರಿ ಬರುತ್ತವೆ. ಈಗ ಇಳುವರಿ ಬರಲ್ಲ. ಕುರಿ, ಮೇಕೆಗಳು ಸಿಗುತ್ತಿಲ್ಲ. ಆದರೆ, ಗ್ರಾಹಕರನ್ನು ವಾಪಸ್ಸು ಕಳುಹಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಲಭ್ಯವಿರುವ ಕುರಿ, ಮೇಕೆಗಳನ್ನು ಕಟಾವು ಮಾಡಿ, ಮಾರಾಟ ಮಾಡುತ್ತಿದ್ದೇವೆ.
ಶ್ರೀರಾಮ್. ಮಾಂಸ ವ್ಯಾಪಾರಿ.
————————————————————————
ಕೂಲಿ ಮಾಡಿ ಜೀವನ ಮಾಡುವವರ ಪಾಲಿಗೆ ಕೋಳಿ ಮಾಂಸ ವರದಾನವಾಗಿತ್ತು. ಕುರಿ, ಮೇಕೆ ಮಾಂಸ ಖರೀದಿಸುವುದು, ದುಸ್ತರ. ಆದರೆ, ಕೋಳಿ ಮಾಂಸದ ಬೆಲೆಯೂ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ನಕ್ಷತ್ರ, ಗೃಹಿಣಿ. ವಿಜಯಪುರ.





