ದಸರಾ ವೈಭವ ನೆನಪಿಸಿದ ತೂಬಗೆರೆಯ ಚಾವಡಿ ಗಣೇಶನ ಆನೆ ಅಂಬಾರಿ ಮೆರವಣಿಗೆ
ದೊಡ್ಡಬಳ್ಳಾಪುರ:ತಾಲ್ಲೂಕಿನ ತೂಬಗೆರೆಯಲ್ಲಿ ಈ ಬಾರಿ ನಡೆದ ಗಣೇಶೋತ್ಸವವು ಆನೆ ಅಂಬಾರಿ ಮೆರವಣಿಗೆಯೊಂದಿಗೆ ಜನಮನ ಸೆಳೆದಿತು. ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯವರು ಮೊದಲ ಬಾರಿಗೆ ಆಯೋಜಿಸಿದ ಆನೆ ಅಂಬಾರಿ ಮೆರವಣಿಗೆ ದಸರಾ ಶೈಲಿಯಲ್ಲಿ ಭವ್ಯವಾಗಿ ಜರುಗಿದ್ದು, ಸಾವಿರಾರು ಭಕ್ತರು ಸಾಕ್ಷಿಯಾದರು.
ಅಲಂಕೃತಗೊಂಡ ಸಿಂಗರಿಸಿದ ಲಕ್ಷ್ಮೀ ಹೆಸರಿನ ಆನೆಯ ಮೇಲಿನ. ಅಂಬಾರಿ ಗ್ರಾಮದ ಜನತೆ ಮೈಸೂರು ದಸರಾ ವೈಭವ ನೆನಪಿಸುವ ಅನೆಯ ಅಂಬಾರಿ ಗ್ರಾಮದ ಜನತೆ ಕಣ್ತುಂಬಿಕೊಂಡರು.
ಅಂಬಾರಿಯಲ್ಲಿ ಶ್ರೀ ಗಣಪತಿ ಮೂರ್ತಿಯನ್ನು ಏರಿಸಿ ಮೆರವಣಿಗೆಯಲ್ಲಿ ಸಾಗಿಸಿದ ದೃಶ್ಯ, ಊರಿನ ಪ್ರಮುಖ ಬೀದಿಗಳಲ್ಲಿ ಭಕ್ತರಿಗೆ ಕಣ್ಣಾರೆ ಕಣ್ತುಂಬಿ ಕೊಳ್ಳುವಂತಾಗಿತ್ತು. ಭಕ್ತರು ಆನೆಯನ್ನು ಸ್ವಾಗತಿಸಿ ಭಕ್ತಿ–ಭಾವದಿಂದ ಮೆರವಣಿಗೆಯನ್ನು ಅನುಸರಿಸಿದರು. ಆನೆಯ ಗಜ ಶಬ್ದ, ನಾದಸ್ವರದ ಮೇಳ, ಡೊಳ್ಳು–ಕುಣಿತ, ಜಾನಪದ ತಂಡಗಳ ಸೊಗಸು – ಎಲ್ಲವೂ ಸೇರಿ ಉತ್ಸವವನ್ನು ದಸರಾ ಜಾತ್ರೆಯಂತೆ ಭವ್ಯ ಗೊಳಿಸಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಪುಷ್ಪಾರ್ಚನೆ ಮಾಡುವುದರ ಮೂಲಕ ಆರಂಭವಾದ ಮೆರವಣಿಗೆ ಸಂಜೆವರೆಗೂ ಊರಿನ ಬೀದಿಗಳಲ್ಲಿ ಸಡಗರ–ಸಂಭ್ರಮದಲ್ಲಿ ಸಾಗಿತು. ಯುವಕರು ಕುಣಿದು–ಕುಪ್ಪಳಿಸಿದರು, ಹಿರಿಯರು ಪಾರಂಪರಿಕ ರೀತಿಯಲ್ಲಿ ಮೆರವಣಿಗೆಗೆ ಕೈಜೋಡಿಸಿದರು. ಭಕ್ತಿ–ಸಾಂಸ್ಕೃತಿಕ ಸಂಯೋಜನೆಯ ಈ ಅಪರೂಪದ ಮೆರವಣಿಗೆ ತೂಬಗೆರೆಯ ಸಾಂಸ್ಕೃತಿಕ ಇತಿಹಾಸದಲ್ಲಿ ಅಕ್ಷರಶಃ ಸುವರ್ಣಾಕ್ಷರಗಳಲ್ಲಿ ಬರೆದಂತಾಯಿತು.
ವಿಸರ್ಜನೆ ಕಾರ್ಯಕ್ರಮವು ಭಕ್ತರ ಶಿಸ್ತಿನ ಪಾಲ್ಗೊಳ್ಳುವಿಕೆಯಿಂದ ಸಕಾಲಕ್ಕೆ ಯಶಸ್ವಿಯಾಗಿ ನೆರವೇರಿತು. ಸರ್ಕಾರದ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಚಾವಡಿ ಗಣೇಶೋತ್ಸವ ಸಮಿತಿಯ ಸಂಚಾಲಕ ಉದಯ ಆರಾಧ್ಯ ಮಾತನಾಡಿ, ಗ್ರಾಮಸ್ಥರು, ಯುವಕರು, ದಾನಿಗಳು, ಮತ್ತು ಎಲ್ಲಾ ಸಹಭಾಗಿಗಳ ಸಹಕಾರದಿಂದಲೇ ಈ ಉತ್ಸವ ಇತಿಹಾಸ ನಿರ್ಮಿಸಿದೆ. ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮುನಿಯಪ್ಪ, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಅಂಬರೀಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ,ವಕೀಲ ಪ್ರತಾಪ್, ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ಮುನಿ ಕೃಷ್ಣಪ್ಪ, ಯುವ ಮುಖಂಡ ಉದಯ ಆರಾಧ್ಯ, ರೈತ ಮುಖಂಡ ವಾಸು,ಘಾಟಿ ಪ್ರಾಧಿಕಾರ ಸದಸ್ಯ, ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಂತಕುಮಾರ್, ರಂಗಪ್ಪ, ನಿವೃತ್ತ ಯೋಧ ಅನಂತರಾಜ್ ಗೋಪಾಲ್, ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರೊಂದಿಗೆ ಗಣಪತಿಯ ಮೆರವಣಿಗೆಗೆ ಸಾಕ್ಷಿಯಾದರು.