ಪತ್ರಿಕಾ ವಿತರಕರಿಗೆ ನಿವೃತ್ತಿ ನಂತರ ಪಿಂಚಣಿ ವ್ಯವಸ್ಥೆ ಜಾರಿಯಾಗಲಿ – ಸರ್ಕಾರಕ್ಕೆ ವಿತರಕರ ಒತ್ತಾಯ

ದೊಡ್ಡಬಳ್ಳಾಪುರ : ಪತ್ರಿಕೆ ಹಂಚುವ ಮೂಲಕ ಬದುಕು ಕಟ್ಟಿಕೊಳ್ಳುತ್ತೇವೆ ಎಂದರೆ ಅದು ಪ್ರಸ್ತುತ ಕಾಲಮಾನದಲ್ಲಿ ಕಷ್ಟ ಸಾಧ್ಯವೇ ಸರಿ, ಅನೇಕ ಸವಾಲುಗಳನ್ನು ಎದುರಿಸಿ ಪತ್ರಿಕೆಗಳ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿರುವ ಪತ್ರಿಕಾ ವಿತರಕರಿಗೆ ಸರ್ಕಾರಿ ಸೌಲಭ್ಯ ಸಿಗುವಂತಗಬೇಕು ಎಂದು ಆರ್‌.ಎಲ್ ಜಾಲಪ್ಪ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ ಆರ್ ರವಿಕಿರಣ್ ತಿಳಿಸಿದರು.

ನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ತಾಲೂಕು ದಿನಪತ್ರಿಕೆ ವಿತರಕರ ಕ್ಷೇಮಾಭಿವೃದ್ದಿ ಸಂಘ ಇವರ ಆಶ್ರಯದಲ್ಲಿ ನಡೆದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಕಾಲಕ್ರಮೇಣ ಸುದ್ದಿ ಪತ್ರಿಕೆಗಳ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಇದರ ಪರಿಣಾಮ ನೇರವಾಗಿ ಪತ್ರಿಕಾ ವಿತರಕರ ಮೇಲೆ ಬೀಳಲಿದೆ. ಪತ್ರಿಕಾ ವಿತರಕರು ಯಾವುದೇ ರಜೆಯಿಲ್ಲದೆ, ಸೌಲಭ್ಯಗಳಿಲ್ಲದೇ, ಪ್ರತಿನಿತ್ಯ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಪತ್ರಿಕೆ ವಿತರಣೆ ಎಂದರೇ ನಿತ್ಯ ನಿರಂತರ ಸಂವೇದನೆ ಎಂಬಂತಾಗಿದೆ. ಇವರಿಗೆ ರಜೆಯೇ ಇಲ್ಲ. ಜೀವನದ ಭದ್ರತೆ ವಿಚಾರದಲ್ಲಿ ಏನು ಇಲ್ಲ. ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಯಾವುದೇ ಸವಲತ್ತುಗಳು ದೊರೆತ್ತಿಲ್ಲ. ಪತ್ರಿಕಾ ವಿತರಕರಿಗೆ ನಿವೃತ್ತಿ ನಂತರ ಪಿಂಚಣಿ ವ್ಯವಸ್ಥೆ ಜಾರಿ ತರಲು ಮನವಿ ಸಲ್ಲಿಸಲಾಗಿದೆ. ಅದರ ಬಗ್ಗೆ ಈಗಾಗಲೇ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿದೆ ಎಂದರು.

ಈ ಹಿಂದೆ ಪತ್ರಿಕೆಗಳಿಗೆ ದೊಡ್ಡ ಬೇಡಿಕೆಯಿತ್ತು. ಆದರೆ ಈಗ ಬೇಡಿಕೆ ಕುಸಿತವಾಗಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಳವಾಗಿದ್ದರೂ ಕೂಡ ಓದುಗರ ಸಂಖ್ಯೆ ಹೆಚ್ಚಳವಾಗಿಲ್ಲ. ಕಾಲ ಬದಲಾದಂತೆ ಪತ್ರಿಕಾ ವಿತರಣೆಗೂ ದೊಡ್ಡ ಹೊಡೆತ ಬಿದ್ದಿದೆ ಎಂದರು.

ತಾಲೂಕು ದಿನಪತ್ರಿಕೆ ವಿತರಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ರವೀಂದ್ರ ಮಾತನಾಡಿ, ೨೦೦೬-೭ರಲ್ಲಿ ವಿತರಕರ ಸಂಘ ಸ್ಥಾಪನೆ ಮಾಡಲಾಯಿತು. ರಾಜ್ಯ ಒಕ್ಕೂಟದಿಂದ ೫ ನೇ ಸಮ್ಮೇಳನ ಮಾಡುವ ಮೂಲಕ ಸರಕಾರವನ್ನು ಮುಟ್ಟುವ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರಕಾರದಿಂದ ಪತ್ರಿಕಾ ವಿತರಕರಿಗೆ ಇ ಶ್ರಮ್ ಕಾರ್ಡ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಕಾರ್ಡ್ಗಳನ್ನು ಪಡೆಯುವ ಮೂಲಕ ಸರ್ಕಾರಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು . ವಿತರಕರ ಸೌಲಭ್ಯಗಳನ್ನು ಪಡೆಯುವ ಕುರಿತು ರಾಜ್ಯ ಮಟ್ಟದಲ್ಲಿ ನಡೆಯುವ ಹೋರಾಟದಲ್ಲಿ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.

ಈ ವೇಳೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ ಉಪ್ಪಾರ, ವಿತರಕರಾದ ರಾಘವೇಂದ್ರ, ದೇವಿನಾಥ್ ಹೆಚ್.ಎ, ಮೂರ್ತಿ ಆರ್, ರಮೇಶ್ ಆರ್, ಗಂಗರಾಜು, ಶಿವರಾಜು, ಚೇತನ್, ನವೀನ್ ಸೇರಿದಂತೆ ಅನೇಕರು ಹಾಜರಿದ್ದರು.