ಶಿರಾ ಕೈಗಾರಿಕಾ ಪ್ರದೇಶದಲ್ಲಿ A1 ಟೆಕ್ಸ್ಟ್ ಸ್ಟೈಲ್ ಕಂಪನಿ ವಿರುದ್ಧ ಪ್ರತಿಭಟನೆ
ಶಿರಾ:ಶಿರಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ A1 ಟೆಕ್ಸ್ಟ್ ಸ್ಟೈಲ್ ಕಂಪನಿ ಸ್ಥಳೀಯ ಗುತ್ತಿಗೆದಾರರು ಮತ್ತು ಕಾರ್ಮಿಕರಿಗೆ ಸೂಕ್ತ ಅವಕಾಶ ನೀಡದೆ ಹೊರಗಿನ ಗುತ್ತಿಗೆದಾರರಿಗೆ ಆದ್ಯತೆ ನೀಡುತ್ತಿರುವುದನ್ನು ಖಂಡಿಸಿ ಇಂದು ತೀವ್ರ ಪ್ರತಿಭಟನೆ ನಡೆಯಿತು. ಸ್ಥಳೀಯ ಗುತ್ತಿಗೆದಾರರು, ಕಾರ್ಮಿಕ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸೇರಿ ಕಂಪನಿ ಗೇಟ್ ಮುಂದೆ ಧರಣಿ ನಡೆಸಿದರು.
ಕಂಪನಿ ಸ್ಥಾಪನೆಯಾಗುವ ವೇಳೆ ಸ್ಥಳೀಯರಿಗೆ ಗುತ್ತಿಗೆ ಹಾಗೂ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಭರವಸೆ ಉಲ್ಲಂಘನೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದರಿಂದ ಸ್ಥಳೀಯ ಯುವಕರು ನಿರುದ್ಯೋಗಕ್ಕೆ ತುತ್ತಾಗಿದ್ದು, ಸಣ್ಣ ಗುತ್ತಿಗೆದಾರರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ಸಂಬಂಧಪಟ್ಟ ಕೈಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ವರದಿ:ಚೇತನ್ ಜಿ ಜಾನಕಲ್





