ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ದೊಡ್ಡಬಳ್ಳಾಪುರ: ನಾವು 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿದ್ದರೂ ಮೂಲಸೌಕರ್ಯಕ್ಕಾಗಿ ಪ್ರತಿಭಟಿಸುವಂತಹ ಪರಿಸ್ಥಿತಿಯಲ್ಲಿರುವುದು ವಿಪರ್ಯಾಸ ಎಂದು ಕರವೇ ಪ್ರವೀಣ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ತಿಳಿಸಿದರು.

ನಗರಸಭೆಯ ಮುಂಭಾಗದಲ್ಲಿ ಗುರುವಾರ ನಗರಸಭೆ ದುರಾಡಳಿತ, ಒಳಚರಂಡಿ ಅವ್ಯವಸ್ಥೆ ಹಾಗೂ ಮಳೆ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲದ್ದನ್ನು ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣ್ಣದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು ನಗರಸಭೆ ವ್ಯಾಪ್ತಿಯ ಜನ ಸಂಖ್ಯೆಗೆ ಪೂರಕವಾಗಿ ನಗರಸಭೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ . ಮಳೆ ಬಂದಾಗ ನಗರದ ಪ್ರಮುಖ ರಸ್ತೆಗಳ ಜತೆಗೆ ತಾಲೂಕುಕಚೇರಿ ವೃತ್ತದಲ್ಲೂ ಕೂಡ ಮಳೆ ನೀರು ನಿಂತು ಕೆರೆಯಾಗುತ್ತದೆ. ಈ ಹಿಂದೆ ಮಳೆ ಬಂದಾಗ ಹೋಟೆಲ್ ಗಳಿಗೆ, ಸರ್ಕಾರಿ ಶಾಲೆ ಆವರಣಕ್ಕೂ ನೀರು ನುಗ್ಗಿದೆ ಅನುಕೂಲಸ್ಥರಿಗೆ ಮಾತ್ರ ಮಧ್ಯವರ್ತಿಗಳಿಂದ ನಗರಸಭೆಯಲ್ಲಿ ಖಾತೆಯಾಗುತ್ತದೆ. ಉಳಿದಂತೆ ಬಡವರಿಗೆ ಯಾವುದೇ ಸೌಲಭ್ಯಗಳು ಕೂಡ ನಗರಸಭೆಯಿಂದ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಅಧ್ಯಕ್ಷ ಶ್ರೀನಗರ ಬಷೀರ್ ಮಾತನಾಡಿ, ಕರವೇ ವತಿಯಿಂದ ಅನೇಕ ಬಾರಿ ರಸ್ತೆ ಅಗಲೀಕರಣ ,ಒಳಚರಂಡಿ ಸಮಸ್ಯೆ, ಸರಕಾರಿ ಜಮೀನು ಒತ್ತುವರಿ ಬಗ್ಗೆ ಹೋರಾಟ ಮಾಡಲಾಗಿದೆ. ಆದರೆ ಯಾವುದೇ ಪ್ರತಿಫಲ ಮಾತ್ರ ಸಿಗಲಿಲ್ಲ. ತಹಶೀಲ್ದಾರ್, ನಗರಸಭೆ ಅಧಿಕಾರಿ ವರ್ಗ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ನಗರಸಭೆಯಲ್ಲಿ ಮಧ್ಯವರ್ತಿಗಳಿಂದ ಏನು ಬೇಕಾದರೂ ಮಾಡಿಸಿಕೊಳ್ಳಬಹುದು. ಜನಸಾಮಾನ್ಯರು ಮಾತ್ರ ಅಲೆದಾಡುವ ಪರಿಸ್ಥಿತಿ ಇದೆ ಎಂದರು.

ನಗರದ ಒಳಚರಂಡಿ ವ್ಯವಸ್ಥೆ ಗಬ್ಬುನಾರುತ್ತಿದೆ.ಮಳೆಯಿಂದ ಚರಂಡಿ ನೀರು ಕೂಡ ರಸ್ತೆಗೆ ಬರುತ್ತಿದೆ. ಇದು ಸಾಂಕೇತಿಕ ಪ್ರತಿಭಟನೆ ಮಾತ್ರ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರವಾದ ಹೋರಾಟ ನಡೆಸಲಾಗುತ್ತದೆ ಎಂದರು.

ಪೌರಾಯುಕ್ತರಿಗೆ ಮನವಿ:

ನಗರಸಭೆ ಮುಭಾಂಗದಲ್ಲಿ ಪ್ರತಿಭಟನೆ ನಡೆಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕವು ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಸ್ತೆ ಗುಂಡಿಗಳ ದುರಸ್ಥಿಗೆ ಮಳೆ ಅಡ್ಡಿ ಉಂಟು ಮಾಡುತ್ತಿದ್ದು, ಮಳೆ ಕಡಿಮೆಯಾದ ಕೂಡಲೇ ದುರಸ್ಥಿ ಮಾಡಲಾಗುತ್ತದೆ. ಉಳಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲಾಗಿದ್ದು, ಆದಷ್ಟು ಬೇಗ ನಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ರಮೇಶ್ ವಿರಾಜ್ , ತಾಲೂಕು ಉಪಾಧ್ಯಕ್ಷ ಜೋಗಳ್ಳಿ ಅಮ್ಮು , ಪ್ರಧಾನ ಕಾರ್ಯದರ್ಶಿ ಎನ್.ಎಲ್.ಎನ್ ವೇಣು, ಖಜಾಂಚಿ ಆನಂದ್ , ಕಾನೂನು ಸಲಹೆಗಾರ ಆನಂದ್ ಕುಮಾರ್, ಕಾರ್ಯದರ್ಶಿಗಳಾದ ಮಂಜು ಮುಕ್ಕೇನಳ್ಳಿ , ರವಿ ಮುಕ್ಕೇನಹಳ್ಳಿ , ರಾಜಘಟ್ಟ ಮಹೇಶ್ , ನಗರ ಉಪಾಧ್ಯಕ್ಷ ನೂರಲ್ಲ ,ಮಂಜುನಾಥ್ , ರವಿ, ಕೆಂಪೇಗೌಡ, ರಾಜಣ್ಣ , ಶ್ರೀನಿವಾಸ್ ,ರಾಮ ,ಮಂಜು, ದಯಾನಂದ್ ಇತರರು ಹಾಜರಿದ್ದರು.