ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ಸಲ್ಲದು–ಹೆಚ್.ರಾಮಕೃಷ್ಣಪ್ಪ

ದೊಡ್ಡಬಳ್ಳಾಪುರ: ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಾಗೂ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ವೃತ್ತದಲ್ಲಿ ಕಾಂಗ್ರೆಸ್ ನಾಯಕ ಐವಾನ್ ಡಿಸೋಜರ ಪ್ರತಿಕೃತಿಯನ್ನು ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ವ್ಯಕ್ತಿಗಳು ನೀಡಿರುವ ದೂರುಗಳ ಬಗ್ಗೆ ತನಿಖೆಗೆ ಅನುಮತಿ ನೀಡಿದ ಕೂಡಲೇ ರಾಜ್ಯಪಾಲರ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರುಗಳು ಹಾಗೂ ಬೆಂಬಲಿಗರು ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಅವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಹುದ್ದೆಯ ಘನತೆಯನ್ನು ಅರಿಯದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಹಾದಿ ಬೀದಿಯಲ್ಲಿ ಅವರ ಪ್ರತಿಕೃತಿಯನ್ನು ಸುಡುವಂತಹ ಹೀನಕೃತ್ಯಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ, ಇದು ಹಿಂದೆಯೂ ನಡೆದಿದೆ. ಅತ್ಯಂತ ವಿವೇಚನಾಯುಕ್ತವಾಗಿ ಕಾನೂನು ತಜ್ಞರೊಡನೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಪರಾಮರ್ಶಿಸಿ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸುವುದು, ಅವರ ಪ್ರತಿಕೃತಿಯನ್ನು ಸುಡುವುದು ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ. ಇಂತಹ ಕೃತ್ಯಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ಮಾಡುತ್ತಿರುವ ಕಾಂಗ್ರೆಸ್ ನಾಯಕರುಗಳ ಮೇಲೆ ಕಾನೂನು ರೀತಿಯ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ವೈದ್ಯಕೀಯ ವಿಭಾಗದ ಸಂಚಾಲಕ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,, ಪ್ರಶಿಕ್ಷಣ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಆರ್.ಗೋಪಿ, ನಗರ ಅಧ್ಯಕ್ಷ ಮುದ್ದಪ್ಪ, ತಾಲ್ಲೂಕು ಅಧ್ಯಕ್ಷ ನಾಗೇಶ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಜೆ.ಮಂಜುನಾಥ್, ತಿರುಮಲ ಮಂಜು, ಯುವ ಮೋರ್ಚಾದ ಅನಿಲ್, ಅಜೇಯ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕವಿತ, ಮುಖಂಡರಾದ ವತ್ಸಲಾ ಜಗನ್ನಾಥ, ಪ್ರತಾಪ್ ಯಾದವ್, ಪ್ರಿಯಾಂಕ, ರಾಮಕಿಟ್ಟಿ ಮತ್ತಿತ್ತರರು ಇದ್ದರು.