ಚಂದ್ರಯಾನ 3 ಸಾಪ್ಟ್ ಲ್ಯಾಂಡಿಂಗ್ ಆಗಸ್ಟ್‌ 23–ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಣೆ

ದೊಡ್ಡಬಳ್ಳಾಪುರ:ಬಾರತೀಯ ಬಾಹ್ಯಾಕಾಶ ಸಂಸ್ಥೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಭಾರತ ದೇಶದ ಚಂದ್ರಯಾನ-3 ರ ಯಶಸ್ಸಿಗಾಗಿ ಆಗಸ್ಟ್ 23 ರಂದು ಮೊದಲ ಬಾರಿಗೆ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸುತ್ತದೆ.ಎಂದು ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪಿ.ರವೀಂದ್ರಬಾಬು ತಿಳಿಸಿದರು.

‌ ಅವರು ದೊಡ್ಡಬಳ್ಳಾಪುರ ನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಯೂಥ್ ರೆಡ್ ಕ್ರಾಸ್ ಕಮಿಟಿ ವತಿಯಿಂದ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚಂದ್ರಯಾನ-೩ರ ಯಶಸ್ಸಿನೊಂದಿಗೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಕೀರ್ತಿ ಹೆಚ್ಚಿದೆ. ಇಸ್ರೋ ಸಾಧನೆಯೂ ಭಾರತೀಯರಲ್ಲಿ ಅಪಾರ ಅಭಿಮಾನ ಮೂಡಿಸಿತು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿ ಮಾಡುವುದು ಚಂದ್ರಯಾನ 3 ರ ಮುಖ್ಯ ಉದ್ದೇಶವಾಗಿತ್ತು. ಚಂದ್ರಯಾನ 3 ರ ಯಶಸ್ಸು ಭಾರತ ದೇಶವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಚಂದ್ರನ ದಕ್ಷಿಣ ​ಧ್ರುವದಲ್ಲೇ ಗಗನ ನೌಕೆಯನ್ನು ಇಳಿಸಲು ಮುಖ್ಯ ಉದ್ದೇಶ ಚಂದ್ರನಲ್ಲಿ ಇರಬಹುದಾದ ನೀರು ಹಾಗೂ ಹಿಮಗಡ್ಡೆ ಕುರಿತಾಗಿ ಮಾಹಿತಿ ಕಲೆ ಹಾಕಲು. ಚಂದ್ರನಲ್ಲಿ ಇರಬಹುದಾದ ಸಂಪನ್ಮೂಲಗಳ ಮಾಹಿತಿ ಸಂಗ್ರಹಕ್ಕೂ ಸಹಕಾರಿ ಆಗಲಿದೆ ಎಂಬ ಉದ್ದೇಶವಾಗಿತ್ತು. ‌ ಚಂದ್ರಯಾನ-3 ಯಶಸ್ಸು ಭಾರತೀಯ ಬಾಹ್ಯಾಕಾಶ ಸಂಸ್ಥೆ ವಿಶ್ವದಾದ್ಯಂತ ಭಾರತಕ್ಕೆ ಕೀರ್ತಿ ತಂದಿದೆ. ಚಂದ್ರಯಾನ 3 ರಿಂದ ಪಡೆದ ದತ್ತಾಂಶದಿಂದ ಚಂದ್ರನ ದಕ್ಷಿಣ ಧ್ರುವವು ದ್ರವ ಶಿಲಾಪಾಕದಿಂದ ಆವೃತವಾಗಿದೆ. ಚಂದ್ರಯಾನ-3 ಯಶಸ್ಸಿನಿಂದ ದೊರೆತ ಮಾಹಿತಿಯ ಹಲವು ಮುಂದಿನ ಸಂಶೋಧನೆಗಳಿಗೆ ಸಹಕಾರಿ ಆಗಲಿ ಎಂದರು.
ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸುದರ್ಶನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಕಡೆಗೆ ಮೊದಲ ಆದ್ಯತೆ ನೀಡಬೇಕು. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆಯ ಪ್ರವೃತ್ತಿಗಳಿಂದ ವಿದ್ಯಾರ್ಥಿಗಳಲ್ಲಿ ಆಲೋಚಿಸುವ ದೃಷ್ಟಿಕೋನ ವಿಭಿನ್ನವಾಗುತ್ತದೆ. ವೈಜ್ಞಾನಿಕ ಮನೋಭಾವದ ಜೊತೆಗೆ ಸೃಜನಶೀಲತೆ, ಕೌಶಲ್ಯ ಹಾಗೂ ಕ್ರಿಯಾಶೀಲತೆಯನ್ನು ರೂಢಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಯೂಥ್ ರೆಡ್ ಕ್ರಾಸ್ ಕಮಿಟಿ ಸಂಚಾಲಕ ಡಾ.ಎಚ್.ನಂಜಪ್ಪ, ಐಕ್ಯೂಎಎಸ್ ಸಂಯೋಜಕರಾದ ಪ್ರೊ.ಎಸ್.ವಿ.ದಿವ್ಯಶ್ರೀ, ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.