*ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ, ಗರ್ಭಿಣಿಯಾದರೂ ವಿವಾಹವಾಗದ ಯುವಕ*: *ನ್ಯಾಯಕ್ಕಾಗಿ ಪೋಲೀಸ್ ಠಾಣೆಗೆ ದೂರು ನೀಡಿದ ನೊಂದ ಯುವತಿ*.
ಕೆ.ಆರ್.ಪೇಟೆ,ಡಿ.13: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಪುರ ಗ್ರಾಮದ ಯುವಕ ಪೃಥ್ವಿ ಎಂಬಾತ ತಾಲ್ಲೂಕಿನ ಗ್ರಾಮವೊಂದರ ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯಾದ ನಂತರ ಮದುವೆಯಾಗದೇ ಮೋಸ ಮಾಡಿರುತ್ತಾನೆ ಎಂದು ನೊಂದ ಗರ್ಭಿಣಿ ಯುವತಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.
ಯುವತಿಯ ತಂದೆ-ತಾಯಿಗಳು ಕೂಲಿ ಕೆಲಸಕ್ಕೆ ಹೋದ ನಂತರ ಯುವತಿಗೆ ಮನೆಗೆ ಹೋಗಿ ನೀರು ಕುಡಿಯುವ ನೆಪದಲ್ಲಿ ಆಕೆಯ ಮೇಲೆ ಕಳೆದ ಒಂದು ವರ್ಷದಿಂದಲೂ ಹಲವು ಭಾರಿ ಅತ್ಯಾಚಾರ ಮಾಡಿರುವ ಆರೋಪಿ ಪೃಥ್ವಿ, ಅತ್ಯಾಚಾರದ ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಗಳಿಗೆ ಚಾಕುವಿನಿಂದ ಚುಚ್ಚಿ ಸಾಯಿಸುವುದಾಗಿ ಹೇಳಿ ಬೆದರಿಕೆ ಹಾಕಿ ಪ್ರತಿ ಬಾರಿಯೂ ಹೊರಟು ಹೋಗುತ್ತಿದ್ದನು. ಆತನ ಪ್ರಾಣ ಬೆದರಿಕೆಗೆ ಹೆದರಿದ ಯುವತಿಯು ಯಾರಿಗೂ ಹೇಳದಂತೆ ಸುಮ್ಮನಾಗಿದ್ದಳು. ಕಳೆದ ಹಲವು ದಿನಗಳ ಹಿಂದೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಆಗ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಲಾಗಿ ಆಕೆಯು ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ತಕ್ಷಣ ಇದಕ್ಕೆ ಯಾರು ಕಾರಣ ಎಂದು ಪೋಷಕರು ವಿಚಾರಿಸಿದಾಗ ಪುರ ಗ್ರಾಮದ ಪೃಥ್ವಿ ಎಂಬಾತ ನನ್ನ ಮೇಲೆ ಆಗಾಗ್ಗೆ ಅತ್ಯಾಚಾರ ಮಾಡಿರುವುದನ್ನು ತಿಳಿಸಿದ್ದಾಳೆ. ತಕ್ಷಣ ಪೋಷಕರು ಆರೋಪಿ ಪೃಥ್ವಿಯ ಮನೆಗೆ ಹೋಗಿ ವಿಚಾರಿಸಿದಾಗ, ಆತ ಅತ್ಯಾಚಾರ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹಾಗೂ ಆರೋಪಿ ಪೃಥ್ವಿ ನಿಮ್ಮ ಮಗಳನ್ನು ವಿವಾಹವಾಗುವುದಾಗಿ ಪೋಷಕರು ಹಾಗೂ ಪಂಚಾಯ್ತಿದಾರರ ಸಮ್ಮುಖದಲ್ಲಿ ರಾಜೀ ಪಂಚಾಯ್ತಿಗೆ ಒಪ್ಪಿಕೊಂಡಿದ್ದನು. ಆದ ಕಾರಣ ಆರೋಪಿ ಪೃಥ್ವಿ, ಯುವತಿಯನ್ನು ಮದುವೆ ಆಗಬೇಕೆಂಬ ಷರತ್ತಿನೊಂದಿಗೆ ಯಾವುದೇ ಪೊಲೀಸ್ ದೂರು ನೀಡದಂತೆ ಪಂಚಾಯ್ತಿದಾರರು ರಾಜೀ ಪಂಚಾಯ್ತಿ ಮಾಡಿಸಿದ್ದರು. ಆದರೆ ಪಂಚಾಯ್ತಿ ಮಾತುಕತೆ ನಡೆದು ಸುಮಾರು 20ದಿನಗಳು ಕಳೆದರೂ ಯಾವುದೇ ಮದುವೆಯನ್ನು ಆಗದೇ ಆರೋಪಿ ಪೃಥ್ವಿ ಗ್ರಾಮದಿಂದ ಆರೋಪಿ ನಾಪತ್ತೆಯಾಗಿರುತ್ತಾನೆ ಅಲ್ಲದೇ ಆತನ ಪೋಷಕರೂ ಸಹ ಮದುವೆಯ ವಿಚಾರದ ಬಗ್ಗೆ ಯಾವುದೇ ಒಪ್ಪಿಗೆ ಸೂಚಿಸದೇ ಮೌನವಾಗಿರುವ ಕಾರಣ ನೊಂದ ಯುವತಿಯು ನೊಂದ ಯುವತಿಯು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಯ ವಿರುದ್ದ ಬಿ.ಎನ್.ಎಸ್.(ಐಪಿಸಿ) ಕಲಂ ಯು/ಎಸ್-64(2)(ಎಂ), 332(ಬಿ), 351(3) ಅನ್ವಯ ಎಫ್.ಐ.ಆರ್. ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.






