ಉದಯೋನ್ಮುಖ ಕಲಾವಿದೆ ಕು. ಸ್ತುತಿ ಎಸ್. ಅಣ್ಣಿಗೇರಿ ರಂಗಪ್ರವೇಶ
ಬೆಂಗಳೂರು:ಬೆಂಗಳೂರಿನ ಹೆಸರಾಂತ ‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಸಂಸ್ಥೆಯ ದಕ್ಷ ನಾಟ್ಯಗುರು ಮತ್ತು ನುರಿತ ನೃತ್ಯಕಲಾವಿದೆ ಶ್ರೀಮತಿ. ಅಭಿನಯ ನಟರಾಜನ್ ಅವರ ಬಳಿ ಕಳೆದ 9 ವರ್ಷಗಳಿಂದ ಬದ್ಧತೆಯಿಂದ ನೃತ್ಯ ಕಲಿಯುತ್ತಿರುವ ಬಾಲಪ್ರತಿಭೆ ಕು. ಸ್ತುತಿ ಎಸ್. ಅಣ್ಣಿಗೇರಿ ಶ್ರೀ ಸುಧೀರ್ ಅಣ್ಣಿಗೇರಿ ಮತ್ತು ವೈಷ್ಣವಿ ಅಣ್ಣಿಗೇರಿ ಅವರ ಪುತ್ರಿ. ಈ ಹದಿನೈದರ ಬಾಲೆ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿಯಿಂದ ಜ್ಯೂನಿಯರ್ ಬೋರ್ಡ್ ಪರೀಕ್ಷೆಯಲ್ಲಿ ‘ಡಿಸ್ಟಿಂಕ್ಷನ್’ ಪಡೆದು ತೇರ್ಗಡೆಯಾಗಿದ್ದಾಳೆ. ಬಹುಮುಖ ಆಸಕ್ತಿಯುಳ್ಳ ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವ ಇವಳು,
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ಚಿತ್ರಕಲೆ ಮತ್ತು ಫೋಟೋಗ್ರಫಿಯಲ್ಲೂ ಪರಿಶ್ರಮಿಸುತ್ತಿದ್ದಾಳೆ. ಈಗಾಗಲೇ ದೇಶಾದ್ಯಂತ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿ ಕಲಾರಸಿಕರ ಮೆಚ್ಚುಗೆ ಪಡೆದಿದ್ದಾಳೆ. ಇದೀಗ ಇವಳು, ತನ್ನ ನೃತ್ಯಪ್ರತಿಭೆಯನ್ನು ಪ್ರದರ್ಶಿಸಲು ದಿ.21 ಭಾನುವಾರ ಸಂಜೆ 5 ಗಂಟೆಗೆ ಬೆಂಗಳೂರು ಗಾಯನ ಸಮಾಜದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಈ ಕನ್ನಿಕೆಯ ಸುಮನೋಹರ ನೃತ್ಯಸೊಬಗನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಸುಸ್ವಾಗತ.
ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀ ಸುಧೀರ್ ಅಣ್ಣಿಗೇರಿ ಮತ್ತು ವೈಷ್ಣವಿ ಅಣ್ಣಿಗೇರಿ ಅವರ ಮುದ್ದಿನ ಮಗಳು ಕು. ಸ್ತುತಿಗೆ ನೃತ್ಯ ಬಾಲ್ಯದ ಒಲವು. ಅವಳ ಆಸಕ್ತಿಗೆ ನೀರೆರೆದು, ಪ್ರೋತ್ಸಾಹ ನೀಡಿದ ಹೆತ್ತವರು 6 ವರ್ಷದ ಬಾಲೆಯನ್ನು ಭರತನಾಟ್ಯ ಕಲಿಯಲು ಅಭಿನಯ ಚತುರೆ ಉತ್ತಮ ನೃತ್ಯಗುರುವೆನಿಸಿದ ಶ್ರೀಮತಿ ಅಭಿನಯಾ ಅವರ ಬಳಿ ಸೇರಿಸಿದರು. ಕಳೆದ 9 ವರ್ಷಗಳಿಂದ ಬದ್ಧತೆಯಿಂದ, ಆಸಕ್ತಿಯಿಂದ ಇವಳಿಗೆ ನೃತ್ಯ ಕಲಿಸುತ್ತಿರುವ ಗುರು ಅಭಿನಯ ಅವರ ಉತ್ತಮ ತರಬೇತಿಯಲ್ಲಿ ಸ್ತುತಿ, ಆಸಕ್ತಿಯಿಂದ ನೃತ್ಯ ಕಲಿಯುತ್ತ ಭರವಸೆಯ ನೃತ್ಯಗಾರ್ತಿಯಾಗಿ ಈಗ ರೂಪುಗೊಳ್ಳುತ್ತಿದ್ದಾಳೆ. ಸದಾ ಲವಲವಿಕೆ- ಉತ್ಸಾಹಗಳಿಂದ ಇರುವ ಸ್ತುತಿ, ನೃತ್ಯದ ಬಗ್ಗೆ ಅದಮ್ಯ ಒಲವು ಬೆಳೆಸಿಕೊಂಡಿದ್ದು, ಪ್ರತಿದಿನ ಅನೇಕ ಗಂಟೆಗಳ ಅಭ್ಯಾಸದಿಂದ ವಿವಿಧ ಯೋಗಭಂಗಿಗಳ ಪ್ರದರ್ಶನ, ಕ್ಲಿಷ್ಟ ಜತಿಗಳ ನಿರ್ವಹಣೆ, ವಿಶೇಷ ನೃತ್ತಗಳಲ್ಲಿ ಅಸ್ಮಿತೆ ಪ್ರದರ್ಶಿಸಲು ಅನುವಾಗುತ್ತಿದ್ದಾಳೆ.
ಓದಿನಲ್ಲೂ ಚುರುಕಾಗಿರುವ ಸ್ತುತಿಗೆ ಗಣಿತದಲ್ಲಿ ತುಂಬಾ ಆಸಕ್ತಿ. ವೈಟ್ ಫೀಲ್ಡ್ ನಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ 9 ನೆಯ ತರಗತಿಯಲ್ಲಿ ಓದುತ್ತಿದ್ದಾದ್ದು, ತರಗತಿಗೆ ಮೊದಲಿಗಳಾಗಿರುವುದು ಇವಳ ವಿಶೇಷ. ಜೊತೆಗೆ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿರುವ ಇವಳು ಅನೇಕ ಬಹುಮಾನಗಳನ್ನು ಗಳಿಸಿದ್ದಾಳೆ. ಸ್ಕೆಚಿಂಗ್ ಮತ್ತು ಪೇಯಿಂಟಿಂಗ್ ನಲ್ಲಿ ಅತ್ಯಾಸಕ್ತಿ ಹೊಂದಿದ್ದಾಳೆ. ಗುರು ಶ್ರೀ ಅರವಿಂದ್ ಚಂದ್ರಶೇಖರನ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾಳೆ. ಕರ್ನಾಟಕ ಬೋರ್ಡ್ ನಡೆಸುವ ‘ಜ್ಯೂನಿಯರ್’ ನೃತ್ಯ ಪರೀಕ್ಷೆಯಲ್ಲಿ ‘ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾಳೆ. ‘ಸಂಚಾರಿ ಕಲಾ ಪರಿಷತ್ತಿ’ನಿಂದ ಭರತನಾಟ್ಯದಲ್ಲಿ ‘ನೃತ್ಯಶ್ರೀ’ ಪ್ರಮಾಣಪತ್ರವನ್ನು ಶ್ರೇಷ್ಟಾಂಕಗಳಿಂದ ಪಡೆದಿರುವುದು ಸ್ತುತಿಯ ವೈಶಿಷ್ಟ್ಯ.
ಈಗಾಗಲೇ ಸ್ತುತಿ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ವಾರಣಾಸಿ ಕ್ಷೇತ್ರಗಳ ಅನೇಕ ದೇವಾಲಯಗಳಲ್ಲಿ, ವಿವಿಧ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ನೀಡಿದ್ದಾಳೆ. ಅವಳ ಸಾಧನೆಗೆ ಅಮಿತ ಪ್ರೋತ್ಸಾಹ ನೀಡುವ ಹೆತ್ತವರೊಂದಿಗೆ ಪುಟ್ಟ ತಂಗಿ ಧೃತಿ ಅಣ್ಣಿಗೇರಿಯೊಂದಿಗಿನ ಸಹಜೀವನದಲ್ಲಿ, ಓದಿನ ಜೊತೆ ನೃತ್ಯಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಇವಳದು.
—-ವೈ.ಕೆ.ಸಂಧ್ಯಾ ಶರ್ಮ,











