1. *ಕರ್ನಾಟಕ*ಮಿತ್ರ* May 14, 2023

    ಬೆಂಗಳೂರು: ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದ್ದಾರೆ.

    ಶನಿವಾರ ರಾತ್ರಿ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಬೊಮ್ಮಾಯಿ, ರಾಜೀನಾಮೆ ಸಲ್ಲಿಸಿದ್ದಾರೆ.

    “ಕರ್ನಾಟಕದ ಜನತೆಯ ತೀರ್ಪನ್ನು ಗೌರವಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆನು. ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಬೊಮ್ಮಾಯಿ ಹೇಳಿದ್ದಾರೆ.

    ಆಪರೇಷನ್ ಕಮಲದ ಮೂಲಕ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರಿತ್ತು. ಆಗ ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಒಂದು ವರ್ಷದ ಆಡಳಿತದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದರು. 2021ರ ಜುಲೈ 26ರಂದು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

    ಬೊಮ್ಮಾಯಿ ಆಡಳಿತದ ವಿರುದ್ಧ 40% ಕಮಿಷನ್, ಪಿಎಸ್‌ಐ ಹಗರಣ, ಮೊಟ್ಟೆ ಹಗರಣ, ಅಸಮರ್ಥ ಆಡಳಿತ ಸೇರಿದಂತೆ ಹಲವಾರು ಆರೋಪಗಳು ಕೇಳಿಬಂದಿದ್ದವು. ರಾಜ್ಯದಲ್ಲಿ ಆಡಳಿತ ವಿರೋಧ ಅಲೆ ಎದ್ದಿತ್ತು.

    ಇದೇ ಸಮಯದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ 65, ಕಾಂಗ್ರೆಸ್‌ 136, ಜೆಡಿಎಸ್‌ 19, ಇತರರು 04 ಸ್ಥಾನಗಳನ್ನು ಗೆದ್ದಿದ್ದಾರೆ.