ಬೆಂಗಳೂರು: ಈ ರೀತಿ ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿಗೆ ತೊಂದರೆಯಾಗುತ್ತೆ. ಬೇರೆ ಬೇರೆ ಇಲಾಖೆಗಳಿಗೆ, ಯೋಜನೆಗಳಿಗೆ ಹೇಗೆ ದುಡ್ಡು ಹೊಂದಿಸ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಬರೀ ಸುಳ್ಳುಗಳನ್ನ ಕಾಂಗ್ರೆಸ್ ಮಾತನಾಡುತ್ತಿದೆ. ಇಂದು ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಪ್ರಶ್ನೆಗಳಿಗೆ ಸದನದಲ್ಲೇ ಉತ್ತರ ಕೊಡ್ತೀನಿ ಎಂದು ಹೇಳಿದರು.
ಇವತ್ತು ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ಸಭೆ ನಡೆಸಿದ್ದಾರೆ. ನಾಡಿನ ಜನತೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ರು. ಎಲ್ಲಾ 5 ಗ್ಯಾರಂಟಿಗಳು ಇಂದೇ ಜಾರಿಯಾಗ್ತಾವೆ ಎಂದುಕೊಂಡಿದ್ರು. ಕೇವಲ ಘೋಷಣೆಯಾಗಿದೆಯಷ್ಟೆ. ಯಾವುದೇ ಕ್ಲಾರಿಟಿ ಇಲ್ಲದೇ ಘೋಷಣೆ ಮಾಡಿದ್ದಾರೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಜಾರಿ ಮಾಡ್ತೀವಿ ಅಂದಿದ್ದಾರೆ. ಜನರ ನಿರೀಕ್ಷೆಯನ್ನ ಹುಸಿ ಮಾಡಿದ್ದಾರೆ ಎಂದು ಕಿಡಿಕಾರಿದರು.
50 ಸಾವಿರ ಕೋಟಿ ಆದಾಯ ಹೆಚ್ಚು ಮಾಡ್ತೀವಿ ಅಂದಿದ್ದಾರೆ. ಕಳೆದ ವರ್ಷಕ್ಕಿಂತ ಆದಾಯ ಹೆಚ್ಚು ಮಾಡ್ತೀವಿ ಅಂತಿದ್ದಾರೆ. ಡಿಕೆಶಿ ದಾರಿಯಲ್ಲಿ ಕೇಳೋರಿಗೆಲ್ಲ ಹೇಳೋಕ್ ಆಗುತ್ತಾ ಅಂತಾರೆ. ಎಲ್ಲರೂ ಸೇರಿ ವೋಟ್ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತಾಡೋದು ಒಂದು ಥರ, ಈಗ ದಾರಿಯಲ್ಲಿ ಹೋಗೋರು ಅಂತಾರೆ. ಕಾಂಗ್ರೆಸ್ ನಿಜ ಬಣ್ಣ ನಿಧಾನಕ್ಕೆ ಗೊತ್ತಾಗುತ್ತೆ ಎಂದು ಟೀಕಿಸಿದರು.
ಈಗಾಗಲೇ ಬಿಪಿಎಲ್ ಲಿಸ್ಟ್ ಇದೆ. ಅದ್ರೂ ಕಾಂಗ್ರೆಸ್ ಮನಸ್ಸು ಮಾಡಿಲ್ಲ. ರಾಜ್ಯ ಸರ್ಕಾರದ ಬಳಿ ಎಲ್ಲಾ ಮಾಹಿತಿ ಇದೆ. ಮನಸ್ಸಿದ್ದರೆ ಮಾರ್ಗ, ಅದರೆ ಗೆದ್ದ ನಂತರ ಯಾಕೋ ಕಾಂಗ್ರೆಸ್ ಮನಸ್ಸು‌ ಮಾಡ್ತಿಲ್ಲ. ಈ ವರ್ಷದಿಂದ ಹೊರಬಂದ ಪದವೀಧರ ನಿರುದ್ಯೋಗಿಗಳಿಗೆ ಅಂತ ಮಾತಾಡಿದ್ದಾರೆ. ಅಂದ್ರೆ ಕಳೆದ ವರ್ಷ ಪದವಿ‌ ಮುಗಿಸಿದವರಿಗೆ ಯೋಜನೆ‌ ಇಲ್ಲ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್‌ಗೆ ಸಂಖ್ಯೆಯೇ ದೊಡ್ಡ ಭಾರ. ಕಾಂಗ್ರೆಸ್‌ನವರಿಗೆ ಬಾಲಗ್ರಹ ಪೀಡೆ ಇದೆ. ಡಿಕೆಶಿ, ಸಿದ್ದರಾಮಯ್ಯರನ್ನ ನೋಡಿದ್ರೇ ಗೊತ್ತಾಗುತ್ತೆ. ಮುಂದಿನ ದಿನಗಳಲ್ಲಿ ಏನೇನ್ ಆಗುತ್ತೆ ನೋಡೋಣ ಎಂದರು.