ಸರ್ಕಾರಿ ಜಾಗ ಉಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ದೊಡ್ಡಬಳ್ಳಾಪುರ:ತಾಲೂಕಿನ ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮಿಸಲು ನಾಮಫಲಕ ಹಾಕಿರುವ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ ಮನವಿ ಪತ್ರ ನೀಡಿದರು.
ನಂತರ ಮಾತನಾಡಿದ ಅವರು ತಾಲ್ಲೂಕಿನ ಮಧ್ಯಭಾಗದಲ್ಲಿರುವ ಭಗತ್ ಸಿಂಗ್ ಕ್ರೀಡಾಂಗಣದ ಪಕ್ಕದಲ್ಲೇ ಇರುವ ಜಾಗವನ್ನು ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಸರ್ಕಾರ ಮೀಸಲಿಟ್ಟಿದೆ. ಆದರೆ ಸರ್ಕಾರಿ ಸ್ವತ್ತನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸುವ ಭೂಗಳ್ಳರು ಈ ಸದರಿ ಜಾಗದಲ್ಲಿ ಅತಿಕ್ರಮಿಸಲು ಸಂಚುಮಾಡಿ ನಾಮಫಲಕವನ್ನು ನೆಟ್ಟಿದ್ದಾರೆ. ನಾಮಫಲಕ ಹಾಕಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ಕಾನೂನು ರೀತಿಯಲ್ಲಿ ಭೂಗಳ್ಳರಿಗೆ ಶಿಕ್ಷೆಗೊಳಪಡಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ.
ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು.
ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಬಿಎಸ್ ಚಂದ್ರಶೇಖರ್. ರಾಜ್ಯಪ್ರದಾನ ಕಾರ್ಯದರ್ಶಿ ಆರ್ ರಮೇಶ್. ರಾಜ್ಯ ಮುಖಂಡ ಪಿ ವಾಸು. ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ. ತಾಲೂಕು ಅಧ್ಯಕ್ಷ ವಿನಯ ಆರಾಧ್ಯ. ತಾಲೂಕು ಕಾರ್ಯದರ್ಶಿ ಪ್ರದೀಪ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.





