ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ಒತ್ತಾಯ
ಚಾಮರಾಜನಗರ:ಜಿಲ್ಲೆಯ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯವನ್ನು ದೇವಾಲಯಕ್ಕೆ ಬರುವ ಆದಾಯದಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಪತ್ರಕರ್ತರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್ ಒತ್ತಾಯಿಸಿದರು .
ಬೆಳಗಾವಿಯ ಸುವರ್ಣ ವಿಧಾನಸೌದದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಮಾತನಾಡಿ, ಮಹದೇಶ್ವರ ಬೆಟ್ಟ ದೇವಾಲಯಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ. ಆ ಹಣದಿಂದ ಸ್ಥಳೀಯ ಗ್ರಾಮಗಳನ ಅಭಿವೃದ್ಧಿ ಬಳಕೆ ಮಾಡಿಕೊಳ್ಳುವಂತೆ ತಿದ್ದುಪಡಿ ಮಾಡಬೇಕು.
ದಶಕಗಳಿಂದಲೂ ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಸಮರ್ಪಕವಾದ ರಸ್ತೆಗಳಿಲ್ಲದೆ ಸಂಚಾರಕ್ಕೆ ಬಹಳ ತೊಂದರೆ ಉಂಟಾಗುತ್ತಿದೆ. ಅಲ್ಲಿನ ಮಹಿಳೆಯರು ನೀರು ತರಲು ಪ್ರತಿನಿತ್ಯವೂ ಕಾಡಿನ ದುರ್ಗಮ ಹಾದಿಯಲ್ಲಿ ತೆರಳುವುದು ಶೋಚನೀಯ.
ರಸ್ತೆ ಸಂಪರ್ಕವಿಲ್ಲದ ಕಾರಣ ಗರ್ಭಿಣಿಯರ ಪ್ರಸವ ಸಂದರ್ಭದಲ್ಲಿ ಬಟ್ಟೆ ಜೋಲಿಯಲ್ಲಿ ಹೊತ್ತುಕೊಂಡು ಆಸ್ಪತ್ರೆ ದಾಖಲಿಸುವ ದಯನೀಯ ಸ್ಥಿತಿ ಎದುರಾಗಿದೆ. ತೀವ್ರ ಅಸ್ವಸ್ಥರಾದ ಹಿರಿಯ ರೋಗಿಗಳೂ ಕೂಡ ಮೈಲುಗಟ್ಟಲೆ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.
ಬೆಟ್ಟದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಜನರೇ ಮಹದೇಶ್ವರ ಸ್ವಾಮಿಯ ನಿಜವಾದ ಭಕ್ತರು. ಅವರು ಕಾಡಿನ ಸಂರಕ್ಷಕರೂ ಅಗಿದ್ದಾರೆ. ದೇವಾಲಯದ ಅಭಿವೃದ್ಧಿಗೆ ಅಡ್ಡಿಯಿಲ್ಲ. ಜೊತೆಗೆ ಅಲ್ಲಿನ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಸ್ಥಾನದ ಸಂಪನ್ಮೂಲವನ್ನು ವಿನಿಯೋಗಿಸಬೇಕು.
ಇತ್ತೀಚಿಗೆ ಸರ್ಕಾರವು ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿ ಒಳ್ಳೆಯ ಕೆಲಸ ಮಾಡಿದೆ. ದೇವಾಲಯಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಶಕ್ತಿ ಯೋಜನೆಯಿಂದ ಮಹಿಳೆಯರ ಭೇಟಿ ಹೆಚ್ಚಾಗಿದೆ. ಹೀಗಾಗಿ ಎರಡನೇ ಹಂತದಲ್ಲಿ ಕಾವೇರಿ ನೀರು ತರುವ ಯೋಜನೆಯಿಂದ ಕುಡಿಯುವ ನೀರು ಪೂರೈಸಬೇಕು.
ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಮೂಲಭೂತ ಸೌಕರ್ಯ ಒತ್ತಾಯಿಸಿ ಮತದಾನ ಬಹಿಸ್ಕರಿಸಿದ್ದರು. ಮತಗಟ್ಟೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅವರೆಲ್ಲರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನೀರು, ವಿದ್ಯುತ್, ಅರೋಗ್ಯ ಸೇವ ಕೇಂದ್ರ, ರಸ್ತೆ, ವಾಹನ ಸಂಚಾರಗಳಂತ ಸೌಲಭ್ಯಗಳ ಆಶ್ರಯದಿಂದ ವಂಚಿತರಾಗಿರುವ ಜನರ ಸಾಕ್ಷರತೆ ಪ್ರಮಾಣ ಹಾಗೂ ಜನರ ಆರೋಗ್ಯ ಮಟ್ಟ ಎಷ್ಟಿದೆ ಎಂಬುದನ್ನು ಗಮನಿಸಬೇಕಿದೆ ಎಂದು ಸದನದ ಗಮನಕ್ಕೆ ತಂದರು
ಇದರ ಜೊತೆಗೆ ಮಲೆಮಹದೇಶ್ವರ ದೇವಾಲಯದಲ್ಲಿ ಹೊರಗುತ್ತಿದೆ ಹಾಗೂ ತಾತ್ಕಾಲಿಕವಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಉದ್ಯೋಗಿಗಳನ್ನು ಖಾಯಂಗೊಳಿಸಬೇಕು. ಆ ಮೂಲಕ ಅವರ ಭವಿಷ್ಯ ರೂಪಿಸಬೇಕಿದೆ ಎಂದೂ ಕೂಡ ಒತ್ತಾಯಿಸಿ, ಹಲವಾರು ವರ್ಷಗಳಿಂದ, ಸೌಲಭ್ಯ ವಂಚಿತರಾದ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ
ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.





