--ಜಾಹೀರಾತು--

ಶಿಕ್ಷಣದಲ್ಲಿ ಕ್ರಾಂತಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ–ನೀಟ್ ತರಬೇತಿ – ಶಾಸಕ ಸಿ.ಬಿ. ಸುರೇಶ್‌ಬಾಬು

On: December 14, 2025 7:04 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಶಿಕ್ಷಣದಲ್ಲಿ ಕ್ರಾಂತಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ–ನೀಟ್ ತರಬೇತಿ– ಶಾಸಕ ಸಿ.ಬಿ. ಸುರೇಶ್‌ಬಾಬು

ಚಿಕ್ಕನಾಯಕನಹಳ್ಳಿ | ಡಿ.14 ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುವ ಉದ್ದೇಶದಿಂದ ಎಸ್.ಬಿ. ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ಹಾಗೂ ನೀಟ್ ತರಬೇತಿ ನೀಡಲಾಗುತ್ತಿದ್ದು, ಇದರಿಂದ ನೂರಾರು ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೇರಿದಂತೆ ಪ್ರತಿಷ್ಠಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಹೇಳಿದರು.

ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಆರ್ಥಿಕ ಹಾಗೂ ಮೂಲಸೌಕರ್ಯಗಳ ಲಭ್ಯತೆ ಇದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದರು. ಈ ಅಂತರವನ್ನು ತುಂಬುವ ನಿಟ್ಟಿನಲ್ಲಿ ಎಸ್.ಬಿ. ಚಾರಿಟಬಲ್ ಟ್ರಸ್ಟ್ ಮೂಲಕ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಗುಣಮಟ್ಟದ ಸಿಇಟಿ–ನೀಟ್ ತರಬೇತಿ, ಪಠ್ಯಪುಸ್ತಕಗಳು ಹಾಗೂ ಪೂರಕ ಅಧ್ಯಯನ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ವರ್ಷ ಸುಮಾರು 183 ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆದಿದ್ದು, ಅವರಲ್ಲಿ 88 ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಲ್ಲಿ 45 ಮಂದಿ ರಾಜ್ಯದ ಟಾಪ್ 25 ಇಂಜಿನಿಯರಿಂಗ್ ಕಾಲೇಜುಗಳಲ್ಲಿ, 30 ಮಂದಿ ಬಿ.ಎಸ್ಸಿ ನರ್ಸಿಂಗ್, 7 ಮಂದಿ ಬಿ.ಫಾರ್ಮಸಿ, 3 ಮಂದಿ ಬಿ.ಎಸ್ಸಿ ಅಗ್ರಿಕಲ್ಚರ್, 2 ಮಂದಿ ಬಿ.ಎಸ್ಸಿ ಅನಸ್ತೇಶಿಯಾ ಹಾಗೂ 1 ವಿದ್ಯಾರ್ಥಿ ಬಿ.ಎಸ್ಸಿ ಎ.ಎಸ್.ಎಸ್ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಶಿಕ್ಷಣದ ದೃಷ್ಟಿಯಿಂದ ಹಿಂದುಳಿದ ಪ್ರದೇಶ ಎಂಬ ಮಾತನ್ನು ಈ ಸಾಧನೆಗಳು ಸುಳ್ಳಾಗಿಸುತ್ತಿವೆ. ಈ ವರ್ಷವೂ ಪ್ರತಿ ಭಾನುವಾರ ಉಚಿತ ಸಿಇಟಿ ತರಬೇತಿ ನಡೆಯಲಿದ್ದು, ಪರೀಕ್ಷೆ ಮುಗಿದ ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ಸಂಪೂರ್ಣ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಆಡಳಿತದ ನಿರ್ಲಕ್ಷ್ಯ ಆರೋಪ

ಜಿಲ್ಲೆಯ ಮಂತ್ರಿಗಳ ಹಿಂದೆ ಮಾತ್ರ ಓಡಾಡುತ್ತಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕುಗಳ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. 5 ಸಾವಿರ ಮನೆಗಳಿಗೆ ಸಂಬಂಧಿಸಿದ ಪಟ್ಟಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸರ್ಕಾರದ ಆದೇಶದಂತೆ ತಾಲ್ಲೂಕಿನಲ್ಲಿ 10 ಮಾದರಿ ಶಾಲೆಗಳನ್ನು ಆರಂಭಿಸುವ ಕಾರ್ಯಕ್ಕೂ ಇನ್ನೂ ಗತಿ ಕಾಣಿಸಿಲ್ಲ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಆರೋಪಿಸಿದರು.

ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸದೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಅಗತ್ಯವಿದ್ದ ಸಿಟಿ ಸ್ಕ್ಯಾನ್ ವ್ಯವಸ್ಥೆಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಅಳವಡಿಸಲಾಗಿದೆ. ಗಣಿಭಾಗದ ಹಣವನ್ನು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕು ಎಂದು ಅವರು ಒತ್ತಾಯಿಸಿದರು. ಉಚಿತ ಸಿಇಟಿ ತರಬೇತಿ ಸಮಿತಿಯ ಅಧ್ಯಕ್ಷ ನಿವೃತ್ತ ಶಿಕ್ಷಣಾಧಿಕಾರಿ ನಾಗೇಶ್, ಮಾಜಿ ಪುರಸಭಾಧ್ಯಕ್ಷ ಎಂ.ಎನ್. ಸುರೇಶ್, ಸವಿತಾ ಸಮಾಜದ ಅಧ್ಯಕ್ಷ ಶಿವಣ್ಣ, ಈಡಿಗ ಸಮಾಜದ ಸೋಮಣ್ಣ, ಬೌದ್ಧ ಸಮಾಜದ ಮುಖಂಡ ಸಾಕ್ಯಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಚೇತನ್ ಜಿ ಜಾನಕಲ್