--ಜಾಹೀರಾತು--

*ಡಿ.21 ರಿಂದ 24 ವರೆಗೆ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ* *ಶೇಕಡ 100% ರಷ್ಟು ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ ಎಬಿ ಬಸವರಾಜು*

On: December 15, 2025 9:08 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಡಿ.21 ರಿಂದ 24 ವರೆಗೆ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ-ಶೇಕಡ 100% ರಷ್ಟು ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ ಎಬಿ ಬಸವರಾಜು*

ಬೆಂ ಗ್ರಾ ಜಿಲ್ಲೆ: ಡಿ.15ಜಿಲ್ಲೆಯಲ್ಲಿ ಡಿಸೆಂಬರ್ 21 ರಿಂದ 24 ರವರೆಗೆ 2025ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಪೋಷಕರು ತಮ್ಮ 0-5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಪೊಲಿಯೋ ಬೂತ್‌ಗಳಿಗೆ ಕರೆದುಕೊಂಡು ಬಂದು ಉಚಿತ ಪೊಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮದ ಅನುಷ್ಠಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ತಾಲ್ಲೂಕು ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, 24/7 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ನಮ್ಮ ಕ್ಲಿನಿಕ್‌ಗಳಲ್ಲಿ ಹಾಗೂ ಆಯ್ದ ಶಾಲಾ, ಅಂಗನವಾಡಿ ಕೇಂದ್ರಗಳಲ್ಲಿ ಪೊಲಿಯೋ ಬೂತ್ ತೆರೆಯಲಾಗುವುದು.

ಜೊತೆಗೆ ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ರಸ್ತೆ ಟೋಲ್‌ ಗೇಟ್‌ಗಳಲ್ಲಿ ಪೊಲಿಯೋ ಬೂತ್ ಗಳನ್ನು ತೆರೆಯಲಾಗುತ್ತದೆ ಎಂದರು.

ಪೊಲಿಯೋ ಲಸಿಕೆ ಹಾಕಲು ಜಿಲ್ಲೆಯಲ್ಲಿ ಅವಶ್ಯಕತೆ ಇರುವಷ್ಟು ಪೋಲಿಯೋ ಬೂತ್ ತೆರೆಯಬೇಕು, ಲಸಿಕೆ ಹಾಕುವವರಿಗೆ ಸೂಕ್ತ ತರಬೇತಿ ನೀಡಿ, ಟಾರ್ಗೆಟ್ ಫಿಕ್ಸ್ ಮಾಡಿ. ಲಸಿಕೆ ವಂಚಿತ ಮಕ್ಕಳಿಗೆ ಮನೆಮನೆಗೆ ತೆರಳಿ ಲಸಿಕೆ ಹಾಕಬೇಕು, ವಲಸೆ ಕಾರ್ಮಿಕರ ಮಕ್ಕಳಿಗೂ ಕೂಡ ಲಸಿಕೆ ಹಾಕಿಸಬೇಕು. ಒಟ್ಟಾರೆಯಾಗಿ ಪೋಲಿಯೋ ಲಸಿಕೆಯಿಂದ ಮಕ್ಕಳು ವಂಚಿತರಾಗದೆ ನೋಡಿಕೊಂಡು ಜಿಲ್ಲೆಯಲ್ಲಿ ಶೇಕಡ 100% ರಷ್ಟು ಪ್ರಗತಿ ಸಾಧಿಸಿ ಎಂದು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

*ಕಳೆದ ಎಂಟು ತಿಂಗಳಲ್ಲಿ 18 ಶಿಶುಗಳ ಸಾವು*
ಕಳೆದ ಏಪ್ರಿಲ್ ನಿಂದ ನವೆಂಬರ್ ವರೆಗೆ 0-1 ವರ್ಷ ದೊಳಗಿನ 18 ಶಿಶುಗಳು ಸಾವನ್ನಪ್ಪಿದ್ದು ಹೊಸಕೋಟೆ 07, ದೇವನಹಳ್ಳಿ 02, ದೊಡ್ಡಬಳ್ಳಾಪುರ 05 ಹಾಗೂ ನೆಲಮಂಗಲ 04 ಶಿಶುಗಳು ಸಾವನ್ನಪ್ಪಿವೆ. ಜೊತೆಗೆ 1-5 ವರ್ಷದೊಳಗಿನ 4 ಮಕ್ಕಳು ಹಾಗೂ ಮೂವರು ಗರ್ಭಿಣಿಯರು ಕಳೆದ ಎಂಟು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ.

ಜಿಲ್ಲಾಧಿಕಾರಿಗಳು ತಾಯಿ ಮತ್ತು ಶಿಶು ಮರಣ ಪರೀಶೀಲನೆ ಸಭೆ ನಡೆಸಿ ಶಿಶು,ಮಕ್ಕಳು ಮತ್ತು ಗರ್ಭಿಣಿಯರ ಹಾರೈಕೆ, ಆರೋಗ್ಯ ಸಂರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರು, ನರ್ಸ್ ಗಳು, ವೈದ್ಯರ ಪಾತ್ರ ಬಹಳ ಮುಖ್ಯ. ಜಿಲ್ಲೆಯಲ್ಲಿ ಮಕ್ಕಳ, ಗರ್ಭಿಣಿಯರ ಸಾವು ತಪ್ಪಿಸುವುದು ನಿಮ್ಮ ಕೈಯಲ್ಲಿರುತ್ತದೆ. ಮಕ್ಕಳ ಹಾರೈಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಎಂದರು.

ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು, ಅವಶ್ಯಕತೆ ಇದ್ದಲ್ಲಿ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ಆರಂಭಿಸಬೇಕು. ಆಶಾ ಕಾರ್ಯಕರ್ತೆಯರು ಮಗು, ತಾಯಿಯ ಆರೋಗ್ಯದ ಬಗ್ಗೆ ನಿಗಾ ವಹಿಸಿ ಕಾಲ ಕಾಲಕ್ಕೆ ಲಸಿಕೆ ಪಡೆಯುತ್ತಿದ್ದಾರೆ ಇಲ್ಲವೇ, ಆರೋಗ್ಯದ ಬಗ್ಗೆ ವಿಚಾರಿಸಬೇಕು. ಆಸ್ಪತ್ರೆಗಳಲ್ಲಿ ಸೂಕ್ತ ಸಮಯಕ್ಕೆ ವೈದ್ಯರು ಇಲ್ಲದಿರುವುದು, ಚಿಕಿತ್ಸೆ ಸಿಗದಿರುವುದು, ಮಾಹಿತಿ-ಅನುಭವದ ಕೊರತೆ, ನಿರ್ಲಕ್ಷ್ಯದಿಂದ ಈ ರೀತಿ ಮಕ್ಕಳ-ಗರ್ಭಿಣಿಯರ ಸಾವು ಸಂಭವಿಸುತ್ತದೆ. ಹೀಗೆ ಮುಂದುವರೆದರೆ ಘಟನೆಗೆ ಕಾರಣರಾಗುವ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ.ಸೀಮಾ ರುದ್ರಪ್ಪ ಮಾಬಳೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಹೇಮಾವತಿ, ತಾಲ್ಲೂಕು ಆರೋಗ್ಯಾಧಿಕಾರಿಗಳು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.