ಸತ್ಯವನ್ನು ಎತ್ತಿ ಹಿಡಿಯುವ ‘ಪೌರಾಣಿಕ ನಾಟಕಗಳು’ ಇಂದಿನ ಜನಾಂಗಕ್ಕೆ ಭಾರತೀಯ ಸಂಸ್ಕೃತಿಯ ಪರಿಚಯ
ನೆಲಮಂಗಲ: ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಇಂದಿನ ಯುವ ಪೀಳಿಗೆಗೆ ಭಾರತೀಯ ಸಂಸ್ಕೃತಿ ಮತ್ತು ಸತ್ಯದ ಮೌಲ್ಯಗಳನ್ನು ಪರಿಚಯಿಸುವಲ್ಲಿ ಪೌರಾಣಿಕ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನೆಲಮಂಗಲ ಪಟ್ಟಣದ ಕೆಇಬಿ ಆಫೀಸ್ ಎದುರು ರಾಜೀವ್ ಗಾಂಧಿ ಯುವಕರ ಸಾಂಸ್ಕೃತಿಕ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟ್ಕೋತ್ಸವದಲ್ಲಿ ಅವರು ಮಾತನಾಡಿದರು.
ಸತ್ಯಕ್ಕೆ ಸಾವಿಲ್ಲ ಸಂಸ್ಕೃತಿ ಪರಂಪರೆಗೆ ಸಂದ ಗೌರವ
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, “ಭಾರತ ದೇಶದ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆ ಪ್ರಪಂಚದ ಅನೇಕ ದೇಶಗಳಿಗೆ ಮಾದರಿಯಾಗಿದೆ. ಅದರಲ್ಲೂ ಕರ್ನಾಟಕವು ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ನಾಡು-ನುಡಿ, ದೇಶಪ್ರೇಮ, ಮತ್ತು ಶಾಂತಿ-ಸೌಹಾರ್ದತೆಯನ್ನು ಸಾರುವ ಪೌರಾಣಿಕ ನಾಟಕಗಳು ಅತ್ಯಂತ ಸ್ಮರಣೀಯ” ಎಂದು ಶ್ಲಾಘಿಸಿದರು.
ಪತ್ರಕರ್ತ ಸತೀಶ್ ಮಾತನಾಡಿ, “ಪೌರಾಣಿಕ ನಾಟಕಗಳಲ್ಲಿ ಸತ್ಯ ಅಡಗಿರುತ್ತದೆ. ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿ ಸತ್ಯವನ್ನು ಎತ್ತಿ ಹಿಡಿಯುತ್ತವೆ. ರಾಮ ತನ್ನ ಮಲತಾಯಿಯ ಸ್ವಾರ್ಥಕ್ಕೆ ಕಾಡಿಗೆ ಹೋಗಿ ಹೋಗಬೇಕಾದ ಸಂದರ್ಭ ಒದಗಿ ಬಂದರು ಪ್ರೀತಿ ವಾತ್ಸಲ್ಯದಿಂದ ಸ್ವೀಕರಿಸಿದ ರಾಮನ ಹೆಂಡತಿಯನ್ನು ರಾವಣ ಅಪರಿಸಿಕೊಂಡು ಹೋಗಿದ್ದು ಪುರಾಣಗಳಲ್ಲಿ ಪೌರಾಣಿಕ ನಾಟಕದಲ್ಲಿ ತಿಳಿದಿರುವ ವಿಚಾರ ರಾಜ ವಿಕ್ರಮನ ಕಷ್ಟದ ಜೀವನವನ್ನು ನೆನಪಿಸಿಕೊಳ್ಳಬಹುದು. ಎಷ್ಟೇ ಕಷ್ಟ ಬಂದರೂ ಸತ್ಯವನ್ನು ಬಿಡದೆ ಪರಿಪಾಲಿಸಿದ ಆತ ಕಳೆದುಕೊಂಡ ರಾಜ್ಯವನ್ನು ಮತ್ತೆ ಪಡೆದ. ಇದರಿಂದ ‘ಸತ್ಯಕ್ಕೆ ಸಾವಿಲ್ಲ, ಸತ್ಯವೇ ಶಾಶ್ವತ’ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು” ಎಂದರು.
ಕಲಾವಿದರ ಮೂಲಕ ಪೌರಾಣಿಕ ನಾಟಕಗಳ ಪ್ರದರ್ಶನ, ಅದರ ಆಶಯಗಳನ್ನು ಬಿಂಬಿಸುವ ಮೂಲಕ ವಿಭಿನ್ನ ಅನುಭವ ನೀಡುತ್ತಿದ್ದು, ಈ ಪ್ರಯತ್ನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಎಸ್. ಮೂರ್ತಿ, ಪತ್ರಕರ್ತ ಅಭಿಷೇಕ್, ಶಾಂತರಾಜ್, ವಿಜಯಲಕ್ಷ್ಮಿ, ಕಲಾವಿದ ನರಸಿಂಹಮೂರ್ತಿ, ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಹೆಚ್. ನಾಗರತ್ನ, ಹಿರಿಯ ಕಲಾವಿದ ರಂಗನಾಥ್, ಸಂಘದ ಅಧ್ಯಕ್ಷ ಡಿ.ವಿ. ಭಾರತ, ಕಾರ್ಯದರ್ಶಿ ಗೋವಿಂದರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





