ಗೋಲ್ಡನ್ ಥ್ರೆಡ್ ಗಾರ್ಮೆಂಟ್ಸ್ ನಲ್ಲಿ ೩ ತಿಂಗಳಿನಿಂದ ವೇತನ ಪಾವತಿಸಿಲ್ಲವೆಂದು ಆರೋಪಿಸಿ, ಕಾರ್ಮಿಕರ ಪ್ರತಿಭಟನೆ

ಶಿಡ್ಲಘಟ್ಟ: ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಮಾಲೀಕರಿಗೆ ಕರೆ ಮಾಡಿದರೆ ಅವರು ಸ್ವೀಕಾರ ಮಾಡುತ್ತಿಲ್ಲ ಎಂದು ಗಾರ್ಮೆಂಟ್ಸ್ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿರುವ ಗೋಲ್ಡನ್ ಥ್ರೆಡ್ಸ್ ಗಾರ್ಮೆಂಟ್ಸ್ ನಲ್ಲಿ ೧೫೦ ಕ್ಕೂ ಹೆಚ್ಚು ಮಂದಿ ಮಹಿಳಾ ಕಾರ್ಮಿಕರು ಸಿದ್ಧ ಉಡುಪುಗಳು ತಯಾರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ನಮಗೆ ಮೂರು ತಿಂಗಳಿನಿಂದ ವೇತನ ಕೊಟ್ಟಿಲ್ಲ. ನಾವು ಹಲವಾರು ಬಾರಿ ಕೇಳಿದರೂ ನಮಗೆ ಸ್ಪಂದನೆ ನೀಡುತ್ತಿಲ್ಲ.

ಕಾರ್ಮಿಕರು ಹಾಗು ಇಲ್ಲಿನ ಸಿಬ್ಬಂದಿಯವರೆಲ್ಲರೂ ಶಿಡ್ಲಘಟ್ಟಕ್ಕೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋದಾಗ ಅವರು ದೂರು ಸ್ವೀಕರಿಸಲಿಲ್ಲ. ಕಾರ್ಖಾನೆಯ ಮಾಲೀಕರೊಂದಿಗೆ ಮಾತನಾಡಿ, ಎರಡು ಕಂತುಗಳಲ್ಲಿ ವೇತನ ನೀಡುವುದಾಗಿ ಭರವಸೆ ನೀಡಿ, ೯ ಲಕ್ಷ ರೂಪಾಯಿಗಳ ಚೆಕ್ ಕೊಟ್ಟಿದ್ದರು. ಈ ಚೆಕ್ಕನ್ನು ಬ್ಯಾಂಕಿನಲ್ಲಿ ಕೊಟ್ಟರೆ ಹಣವಿಲ್ಲವೆಂದು ವಾಪಸ್ಸು ಕಳುಹಿಸಿದ್ದಾರೆ. ಚೆಕ್ ಬೌನ್ಸ್ ಆಗಿದೆ.

ನಾವು ಇದನ್ನೇ ನಂಬಿಕೊಂಡು ನೂರಾರು ಮಂದಿ ಜೀವನ ನಡೆಸುತ್ತಿದ್ದೇವೆ. ಒಬ್ಬೊಬ್ಬರಿಗೆ ತಿಂಗಳಿಗೆ ೧೧ ಸಾವಿರದಂತೆ ೩೩ ಸಾವಿರ ಕೊಡಬೇಕು. ನಮಗೆ ಅರ್ಧ ಸಂಬಳವನ್ನಾದರೂ ಕೊಡಿ ಎಂದು ಅಂಗಲಾಚಿಕೊಂಡರೂ ಅವರು, ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ನಾವು ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಆದ್ದರಿಂದ ನಾವು, ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಿರುವ ಉತ್ಪನ್ನ ಸಹಿತ ಕಾರ್ಖಾನೆಗೆ ಬೀಗ ಹಾಕಿದ್ದೇವೆ.

ಪೊಲೀಸರೂ ಮಾಲೀಕರ ಬಳಿಯಲ್ಲಿ ನಡೆಸುತ್ತಿರುವ ಮಾರುಕತೆಗಳು ವಿಫಲವಾಗಿವೆ. ರಾತ್ರೋ ರಾತ್ರಿ ಕಾರ್ಖಾನೆಯನ್ನು ಖಾಲಿ ಮಾಡಿಕೊಂಡು ಹೋದರೆ ನಾವೆಲ್ಲಿಗೆ ಹೋಗಬೇಕು? ನಮ್ಮ ಮಕ್ಕಳ ಭವಿಷ್ಯದ ಕನಸು ಇಟ್ಟುಕೊಂಡು ನಾವು ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ. ವೇತನವನ್ನೂ ಕೊಡದೇ ಹೀಗೆ ಸತಾಯಿಸಿದರೆ ನಾವು ಬದುಕುವುದು ಹೇಗೆ ಎಂದು ಕಾರ್ಮಿಕ ಮಹಿಳೆ ಮಧು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾರ್ಖಾನೆಯನ್ನು ನಡೆಸುತ್ತಿರುವ ಮಾಲೀಕರಿಗೆ ನಾವು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಇಲ್ಲಿನ ಕೆಲ ಯಂತ್ರೋಪಕರಣಗಳನ್ನು ಬೇರೆ ಕಡೆಗೆ ಸಾಗಿಸಿಬಿಟ್ಟಿದ್ದಾರೆ. ಈಗ ಪೊಲೀಸರ ಮೂಲಕ ನಮ್ಮಿಂದ ಬೀಗವನ್ನು ತೆಗೆದುಕೊಂಡಿದ್ದಾರೆ. ಬೀಗವನ್ನು ಇಟ್ಟುಕೊಂಡು,ಒಳಗಿರುವ ಉತ್ಪನ್ನಗಳನ್ನೂ ಹೊತ್ತುಕೊಂಡು ಹೋದರೆ, ನಮಗೆ ಬಾಕಿ ವೇತನ ಕೊಡುವವರು ಯಾರು? ನಮ್ಮ ಕೆಲಸದ ಗತಿಯೇನು? ನಾವು ಇಷ್ಟು ವರ್ಷಗಳ ಇಲ್ಲಿ ಕೆಲಸ ಮಾಡಿ, ಪುನಃ ಎಲ್ಲಿಗೆ ಹೋಗಬೇಕು ಎಂದು ಕೆಲ ಕಾರ್ಮಿಕ ಮಹಿಳೆಯರು ಅಲವತ್ತುಕೊಂಡರು.

ರಸ್ತೆ ಬಂದ್ ಮಾಡಲು ಮುಂದಾಗಿದ್ದ ಮಹಿಳೆಯರು: ಗಾರ್ಮೆಂಟ್ಸ್ ನ ಮಾಲೀಕರು, ನಮ್ಮ ಕೂಗಿಗೆ ಸ್ಪಂದಿಸುತ್ತಿಲ್ಲ. ನಮಗೆ ನ್ಯಾಯ ಕೊಡುವವರೂ ಇಲ್ಲ ಎಂದು ಆಕ್ರೋಶಗೊಂಡ ಕಾರ್ಮಿಕರು, ಮುಖ್ಯರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಕಾರ್ಮಿಕರನ್ನು ಮನವೊಲಿಸಿ, ರಸ್ತೆಯಿಂದ ತೆರವುಗೊಳಿಸಿದರು.