--ಜಾಹೀರಾತು--

ಭಾವಪೂರ್ಣ ನೃತ್ಯದ ಮುದ ನೀಡಿದ ಯಶಸ್ವಿನಿ ಕುಮಾರ್

On: November 30, 2025 12:52 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಭಾವಪೂರ್ಣ ನೃತ್ಯದ ಮುದ ನೀಡಿದ ಯಶಸ್ವಿನಿ ಕುಮಾರ್

ಬೆಂಗಳೂರು:ಖ್ಯಾತ ‘ನಿರ್ಮಲ ನೃತ್ಯ ನಿಕೇತನ’ದ ಉತ್ತಮ ನೃತ್ಯಗುರು ವಿ. ನಿರ್ಮಲಾ ಮಂಜುನಾಥ್ ಶಿಷ್ಯೆ ಹದಿನಾಲ್ಕರ ಬಾಲೆ ಯಶಸ್ವಿನಿ ಕುಮಾರ್ ತನ್ನ ವಯಸ್ಸಿಗೂ ಮೀರಿದ ನರ್ತನ ಪ್ರತಿಭೆ ತೋರಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು. ಭಾರತೀಯ ವಿದ್ಯಾಭವನದ ವೇದಿಕೆಯ ಮೇಲೆ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದ ಇವಳು, ಅತ್ಯಂತ ಲವಲವಿಕೆಯಿಂದ ಹಸನ್ಮುಖದಲ್ಲಿ, ಕಣ್ಣು- ಹುಬ್ಬುಗಳ ಚಲನೆಯಲ್ಲಿ ಚೈತನ್ಯಾಭಿವ್ಯಕ್ತಿ ಮಾಡಿ ಪಾದರಸದ ಆಂಗಿಕಾಭಿನಯದಿಂದ ಮನಸೆಳೆದಳು.
ಪುಷ್ಪಾಂಜಲಿ, ಶ್ಲೋಕ ಮತ್ತು ಅಲರಿಪು, ಜತಿಸ್ವರದಲ್ಲಿ ಅವಳ ಅಂಗಶುದ್ಧ ಹಸ್ತಮುದ್ರೆ, ಖಚಿತ ಅಡವುಗಳ ಸೌಂದರ್ಯ ವಿಶೇಷವಾಗಿ ಗೋಚರಿಸಿತು. ಪ್ರಸ್ತುತಿಯ ಪ್ರಧಾನ ಭಾಗ ‘ವರ್ಣ’ದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಪ್ರಣಯದ ವಿರಹದಿಂದ ತಲ್ಲಣಗೊಂಡ ನಾಯಕಿಯಾಗಿ ಕಲಾವಿದೆ ತನ್ಮಯತೆಯಿಂದ ತನ್ನ ಭಾವನೆಗಳನ್ನು ಅನಾವರಣಗೊಳಿಸಿದಳು. ಕ್ಲಿಷ್ಟವಾದ ಜತಿಗಳಿಂದ ಕೂಡಿದ ಈ ದೀರ್ಘಬಂಧವನ್ನು ನಿರ್ವಹಿಸಲು ಕಲಾವಿದರಿಗೆ ಉತ್ತಮ ಲಯ-ತಾಳಜ್ಞಾನ,ಆಳವಾದ ನೆನಪಿನ ಶಕ್ತಿ ಇರಬೇಕಾಗುತ್ತದೆ. ಈ ಸವಾಲನ್ನು ಬಹು ಸಮರ್ಥವಾಗಿ ಎದುರಿಸಿದ ಕಲಾವಿದೆ ಬಹು ಆತ್ಮವಿಶ್ವಾಸದಿಂದ ರಂಗವನ್ನು ಪೂರ್ಣ ಬಳಸಿಕೊಂಡು ಜಿಂಕೆಯ ಮರಿಯಂತೆ ಕುಪ್ಪಳಿಸುತ್ತ ನರ್ತಿಸಿ ವಿಸ್ಮಯಗೊಳಿಸಿದಳು. ಉತ್ತಮ ಶಿಕ್ಷಣ ಪಡೆದ ಅವಳ ಪಾದಚಲನೆ- ಆಂಗಿಕಗಳು ಪರಿಪೂರ್ಣವಾಗಿದ್ದು, ಸುಲಲಿತ ಅಭಿನಯ ಪ್ರಾವೀಣ್ಯ ಎದ್ದು ಕಂಡಿತು.
ಮುಂದೆ ‘ಹರಿಹರದೇವನ ರಗಳೆ’ಯಲ್ಲಿ, ಕೈಲಾಸದಿಂದ ಧರೆಗಿಳಿದು ಬಂದ ಪರಮಶಿವ ಕುಂಬಾರ ಗುಂಡಯ್ಯನ ಮುಂದೆ ಪ್ರತ್ಯಕ್ಷನಾಗಿ , ಕುಂಬಾರನ ಮಣ್ಣು ತುಳಿಯುವ ಹದವಾದ ಲಯ- ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಅದ್ಭುತ ನರ್ತನ ಮಾಡುವ ಕಥಾನಕವನ್ನು ಕಣ್ಣೆದುರು ತಂದು ಕಲಾವಿದೆ ಅತ್ಯಂತ ಸೊಗಸಾಗಿ ತನ್ನ ಶಕ್ತಿಶಾಲಿ ನರ್ತನ ಪ್ರತಿಭೆಗಳಿಂದ ಸಾಕ್ಷಾತ್ಕರಿಸಿದಳು. ಪುರಂದರದಾಸರ ‘ಗುಮ್ಮನ ಕರೆಯದಿರೆ’ -ಎಂಬ ವಾತ್ಸಲ್ಯ ಪದದ ಪ್ರತಿಯೊಂದು ಸಾಲುಗಳಿಗೂ ಯಶಸ್ವಿನಿ ಸಮರ್ಥ- ಸಮ್ಮೋಹಕ ಅಭಿನಯ ತೆರೆದು, ರಸಿಕರ ಮನಕ್ಕೆ ತನ್ನ ಮನಮೋಹಕ ಭಂಗಿಗಳಿಂದ ಮುದ ನೀಡಿದಳು.
ಅಂತ್ಯದಲ್ಲಿ ತಿಲ್ಲಾನ- ಮಂಗಳದ ಝೇಂಕಾರದೊಂದಿಗೆ, ಆಕೆಯ ವಿಶೇಷ ಅಲಂಕಾರಗೊಂಡ ‘ಕೊರವಂಜಿ’ ವೇಷ, ಜಾನಪದ ನೃತ್ಯ, ಅವಳು ಹಾಕಿದ ಚುರುಕಾದ ಹೆಜ್ಜೆಗಳ ಮೋಡಿ ಆಹ್ಲಾದಕರ ಆನಂದವನ್ನು ನೀಡಿ, ಈ ಅಪರೂಪದ ನೃತ್ಯ ನೆನಪಿನಲ್ಲಿ ಉಳಿಯುವಂತಿದ್ದವು. ಅವಳ ನೃತ್ಯದ ಹೆಜ್ಜೆಗಳಿಗೆ ಸ್ಫೂರ್ತಿದಾಯಕವಾಗಿ ನಟುವಾಂಗದ ಮೆರಗು ನೀಡಿದ ಗುರು ನಿರ್ಮಲ ಅವರ ಕಾರ್ಯಕ್ಷಮತೆ ಸ್ತುತ್ಯಾರ್ಹ.
ರಂಗಪ್ರವೇಶದ ಮುಖ್ಯ ಅತಿಥಿಗಳಾಗಿ- ಲೇಖಕಿ, ನೃತ್ಯ ವಿಮರ್ಶಕಿ ವೈ.ಕೆ.ಸಂಧ್ಯಾ ಶರ್ಮ ಮತ್ತು ಕರ್ನಾಟಕ ಬ್ಯಾಂಕ್ ಚೇರ್ಮನ್- ಪ್ರದೀಪ್ ಕುಮಾರ್ ಪಾಂಜ ಭಾಗವಹಿಸಿದ್ದರು.
******* *ವೈ.ಕೆ.ಸಂಧ್ಯಾ ಶರ್ಮ*