ಅಪರಾಧ ತಡೆ ಮಾಸಾಚರಣೆ: ಪೊಕ್ಸೋ, ಬಾಲ್ಯ ವಿವಾಹ ಹಾಗೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿ
ದೊಡ್ಡೆಣ್ಣೆಗೆರೆ (ಹುಳಿಯಾರು): ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ, ತಿಪಟೂರು ಉಪ ವಿಭಾಗ ಹಾಗೂ ಚಿಕ್ಕನಾಯಕನಹಳ್ಳಿ ವೃತ್ತದ ವತಿಯಿಂದ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ದೊಡ್ಡೆಣ್ಣೆಗೆರೆಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಂದನಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಿತ್ತರಂಜನ್ ಅವರು, ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನುಗಳ ಕುರಿತ ಮಾಹಿತಿ ಹಂಚಿಕೊಂಡರು.
ಪೊಕ್ಸೋ ಕಾಯ್ದೆ ಕುರಿತು ಜಾಗೃತಿ
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ಕಿರುಕುಳ ಕಾನೂನುಬದ್ಧ ಅಪರಾಧವಾಗಿದ್ದು, ಇಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬಾಲ್ಯ ವಿವಾಹಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ
ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷ ಪೂರ್ತಿಯಾಗದಿದ್ದರೆ ಅದು ಬಾಲ್ಯ ವಿವಾಹವಾಗುತ್ತದೆ. ಇಂತಹ ವಿವಾಹ ನಡೆಸಿದವರು, ನೆರವಾದವರು ಹಾಗೂ ಪಾಲ್ಗೊಂಡವರ ವಿರುದ್ಧಲೂ ಪ್ರಕರಣ ದಾಖಲಾಗುತ್ತದೆ ಎಂದು ಸಿಐ ಅವರು ಎಚ್ಚರಿಸಿದರು.
ಸಂಚಾರ ನಿಯಮ ಪಾಲನೆ ಅವಶ್ಯ
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಸಲಹೆ ನೀಡಿದರು. ಜೊತೆಗೆ ವಾಹನ ಚಾಲನೆ ವೇಳೆ ವಿಮೆ, ಚಾಲನಾ ಪರವಾನಗಿ ಹಾಗೂ ವಾಹನ ದಾಖಲೆಗಳನ್ನು ಕಡ್ಡಾಯವಾಗಿ ಸಾಗಿಸಬೇಕು ಎಂದು ಸೂಚಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ದೊಡ್ಡೆಣ್ಣೆಗೆರೆ ಪಂಚಾಯಿತಿ ಸದಸ್ಯ ಪ್ರಶಾಂತ್, ಆಟೋ ಚಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವರದಿ:ಚೇತನ್ ಜಿ ಜಾನಕಲ್





