ದೊಡ್ಡಬಳ್ಳಾಪುರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಯಲಹಂಕದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾವಣ್ಯ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಚಿಕಿತ್ಸೆಗೆ ಸ್ಪಂದಿಸದೇ ಚಿರನಿದ್ರೆಗೆ ಜಾರಿದ್ದಾರೆ.

ಕಳೆದ ಗುರುವಾರ(ಆ.10) ಎಪಿಎಂಸಿ ಎದುರು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮುದ್ದನಾಯಕನಪಾಳ್ಯ ನಿವಾಸಿಯಾದ ವೆಂಕಟೇಶ್ ತಮ್ಮಮಗಳನ್ನು ಶಾಲೆಗೆ ಬಿಡಲು ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು.

ಬೈಕ್ ಲಾರಿಯ ಕೆಳಗೆ ಹೋಗಿತ್ತು. ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ಯಶಸ್ವಿನಿ ಕೈ ತುಂಡಾಗಿತ್ತು. ಆಕೆಯನ್ನು ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ   ಕೈ ಜೋಡಣೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಆಕೆಗೆ ತುರ್ತು ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿಸಿದ್ದರು. ವಿದ್ಯಾರ್ಥಿನಿಯ ಚಿಕಿತ್ಸೆಗಾಗಿ ಸಾರ್ವಜನಿಕರು ರಕ್ತದ ಜೊತೆ ಧನ ಸಹಾಯವನ್ನೂ ಮಾಡುತ್ತಿದ್ದರು. ಆದರೆ ಬುಧವಾರ ಮುಂಜಾನೆ ಯಶಸ್ವಿನಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರೆಳೆದಿದ್ದಾರೆ.

ಕುಟುಂಬದಲ್ಲಿ ಪತಿ ಹಾಗೂ ಮಗಳನ್ನು ಕಳೆದುಕೊಂಡ ತಾಯಿ ಸಂಧ್ಯಾ ಅವರ ಆಕ್ರಂಧನ ಮುಗಿಲುಮುಟ್ಟಿದೆ.ಯಶಸ್ವಿನಿ ಕಣ್ಣುಗಳನ್ನು ನೇತ್ರದಾನ‌ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.