ಮಾರುಕಟ್ಟೆ ತಂತ್ರವನ್ನು ಅರಿತು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಲಹೆ

ಶಿಡ್ಲಘಟ್ಟ: ರೈತರ ಕೃಷಿ ಉತ್ಪನ್ನಗಳಿಗೆ ಮುಖ್ಯವಾಗಿ ಎದುರಾಗುವುದೆ ಮಾರುಕಟ್ಟೆ ಸಮಸ್ಯೆ. ಮಾರುಕಟ್ಟೆ ತಂತ್ರವನ್ನು ಅರಿತು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ್ದೇ ಆದಲ್ಲಿ ಕೃಷಿಯಲ್ಲಿ ಲಾಭ ನಿಶ್ಚಿತ. ಹಾಗಾಗು ಸರ್ಕಾರವು ರೈತರ ಉತ್ಪನ್ನಗಳಿಗೆ ಕಾಲಕಾಲಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಲೆ ಇದೆ ಎಂದು ಎನ್.ಆರ್.ಎಲ್.ಎಂನ ಜಿಲ್ಲಾ ಯೋಜನಾ ನೋಡೆಲ್ ಅಧಿಕಾರಿ ಹಾಗೂ ಡಿ.ಆರ್.ಡಿ.ಎ ಯೋಜನಾ ನಿರ್ದೇಶಕ ಅತಿಕ್ ಪಾಷ ತಿಳಿಸಿದರು.
ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(ಸಂಜೀವಿನಿ)ಯ ಆಶ್ರಯದಲ್ಲಿ ತಾಲ್ಲೂಕಿನ ಬೆಳ್ಳೂಟಿ ಗೇಟ್ ನ ಶ್ರೀಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತಾಂಬೆ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ರಸಗೊಬ್ಬರ, ತಿಪ್ಪೇಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಎಲ್ಲವುಗಳ ಬೆಲೆಯೂ ಹೆಚ್ಚಿದೆ. ಅದಕ್ಕೆ ತಕ್ಕಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ಸಿಗದಿರುವುದು ಕೃಷಿಯಲ್ಲಿ ನಷ್ಟಕ್ಕೆ ಕಾರಣವಾಗುತ್ತಿದೆ. ಮಾರುಕಟ್ಟೆಯ ಬೇಡಿಕೆ, ಮಾರುಕಟ್ಟೆಯ ತಂತ್ರಗಳನ್ನು ತಿಳಿಯದೆ ಈ ಸಮಸ್ಯೆ ಎದುರಾಗುತ್ತಿದೆ ಎಂದರು.
ರೈತರು ಪ್ರೊಡ್ಯೂಸರ್ಸ್ ಕಂಪನಿ ಸ್ಥಾಪಿಸಿಕೊಂಡರೆ ಕಂಪನಿ ಮೂಲಕ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಆಗಲಿದೆ. ಸ್ಪರ್ಧಾತ್ಮಕ ಬೆಲೆ ಸಿಗಲಿದೆ. ಮುಖ್ಯವಾಗಿ ದಲ್ಲಾಳಿಗಳ ಹಾವಳಿ ಇಲ್ಲದೇ ಉತ್ಪನ್ನದ ಬೆಲೆ ನೇರವಾಗಿ ರೈತನಿಗೆ ಸಿಗುತ್ತದೆ ಎಂದು ಹೇಳಿದರು.
ಕಂಪನಿಯ ಮೂಲಕ ರೈತರಿಗೆ ಕಾಲ ಕಾಲಕ್ಕೆ ತರಬೇತಿ, ಮಾರ್ಗದರ್ಶನ, ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳು, ಬಾಡಿಗೆಗೆ ಯಂತ್ರಗಳು ಸಿಗಲಿವೆ. ನಿಮ್ಮದೇ ಕಂಪನಿಯನ್ನು ನೀವು ಕಟ್ಟಿ ಬೆಳೆಸಿದರೆ ಮುಂದೊಂದು ದಿನ ಅದು ನಿಮ್ಮ ನೆರವಿಗೆ ನಿಲ್ಲಲಿದೆ ಎಂದು ಕಂಪನಿಯಿಂದ ರೈತರಿಗೆ ಸಿಗುವ ಉಪಯೋಗಗಳ ಬಗ್ಗೆ ವಿವರಿಸಿದರು.
ಎನ್.ಆರ್.ಎಲ್.ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ವಿಜಯ್ ಕುಮಾರ್ ಅವರು, ಷೇರುದಾರರೊಂದಿಗೆ ಸಂವಾದ ನಡೆಸಿದರು. ಷೇರುದಾರರು ಕಂಪನಿಯ ಎಲ್ಲ ಕಾರ್ಯಕ್ರಮ, ವ್ಯವಹಾರ, ಲಾಭ ನಷ್ಟದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂದರು.
ಸಧ್ಯಕ್ಕೆ ಜಿಲ್ಲೆಯಲ್ಲಿ ಎರಡಷ್ಟೆ ಮಹಿಳಾ ರೈತರ ಉತ್ಪಾದಕ ಕಂಪನಿಗಳಿದ್ದು ಚಿಂತಾಮಣಿಯಲ್ಲಿ ಒಂದು ಶಿಡ್ಲಘಟ್ಟದಲ್ಲಿ ಭಾರತಾಂಬೆ ರೈತ ಉತ್ಪಾದಕ ಕಂಪನಿ ಇದೆ. ತಾಲ್ಲೂಕು ಪಂಚಾಯಿತಿಯಲ್ಲೆ ಕಚೇರಿಯಿದ್ದು ಅಲ್ಲಿಂದಲೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಶೀಘ್ರದಲ್ಲೆ ಕಚೇರಿ ಹೊಂದಲಿದ್ದು ಷೇರುದಾರ ರೈತರಿಗೆ ಏನು ಅಗತ್ಯವೋ ಅವುಗಳ ಬೇಡಿಕೆ ಪಟ್ಟಿ ಮಾಡಿ ಆ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಕಂಪನಿಯಿಂದಲೆ ಸರಕು ಸಾಗಣೆ ವಾಹನದಲ್ಲಿ ರೈತರ ಮನೆ ಬಾಗಿಲಿಗೆ ಪರಿಕರಗಳನ್ನು ಸಾಗಿಸಲಾಗುವುದು ಎಂದು ತಿಳಿಸಿದರು.
ಕಂಪನಿ ಅಧ್ಯಕ್ಷೆ ಬಿ.ಪಿ.ಆಶಾ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಸುಗಳಿಗೆ ಹಾಸುವ ಮ್ಯಾಟ್ ಮತ್ತು ಟಾರ್ಪಲಿನ್ ಗೆ ರೈತರು ಹೆಚ್ಚು ಬೇಡಿಕೆಯಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಿಯಾಯಿತಿ ದರದಲ್ಲಿ ಇವುಗಳನ್ನು ನಮ್ಮ ಕಂಪನಿಯ ಷೇರುದಾರ ರೈತರಿಗೆ ವಿತರಿಸಲಾಗುವುದು.ಹಲವು ಯೋಜನೆಗಳನ್ನು ರೂಪಿಸಿದ್ದು ಎಲ್ಲರ ಸಹಕಾರದಿಂದ ಎಲ್ಲ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದರು.
ಷೇರುದಾರರಿಗೆ ಷೇರುದಾರತ್ವದ ಪ್ರಮಾಣ ಪತ್ರವನ್ನು ನೀಡಲಾಯಿತು. ಕಂಪನಿ ಅಧ್ಯಕ್ಷೆ ಜೆ.ವೆಂಕಟಾಪುರ ಆಶಾ, ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬಿರಾದಾರ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ವಿಜಯ್ ಕುಮಾರ್, ಮುಖ್ಯ ಕಾರ್ಯನಿರ್ವಣಧಿಕಾರಿ ಎಸ್.ನಯನಶ್ರೀ, ಲೆಕ್ಕಾಧಿಕಾರಿ ಆರ್.ಎನ್.ಸುರೇಶ್, ಕಂಪನಿಯ ಉಪಾಧ್ಯಕ್ಷೆ ಜಂಗಮಕೋಟೆ ನಸ್ರೀನ್ ತಾಜ್, ನಿರ್ದೇಶಕರಾದ ಚೀಮಂಗಲ ಮಾಲಾಶ್ರೀ, ಆನೂರು ನಳಿನ, ಮಳಮಾಚನಹಳ್ಳಿ ಚೈತ್ರ, ಮೇಲೂರು ಪ್ರಭ, ಮಳ್ಳೂರು ಮಂಜುಳ, ಷೇರುದಾರರು, ಕೃಷಿ ಸಖಿಯರು ಹಾಜರಿದ್ದರು.