ಸರ್ಕಾರದ ಒಳ ಮೀಸಲಾತಿ ಘೋಷಣೆ ಅವೈಜ್ಞಾನಿಕ.. ಓಬದೇನಹಳ್ಳಿ ಮುನಿಯಪ್ಪ
ದೊಡ್ಡಬಳ್ಳಾಪುರ:ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿ ಅವೈಜ್ಞಾನಿಕವಾದದ್ದು ಎಂದು ಆರೋಪಿಸಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ 1% ಮೀಸಲಾತಿ ಕೊಡಬೇಕು. ಬೋವಿ ಕೊರಚಾ ಕೊರಮ ಲಂಬಾಣಿ ಸಮುದಾಯಗಳಿಗೆ ಕನಿಷ್ಠಪಕ್ಷ 5% ಒಳ ಮೀಸಲಾತಿ ಘೋಷಿಸಬೇಕು ಎಂದು ಅಗ್ರಹಿಸಿ ರಾಜ್ಯ ಸರ್ಕಾರದ ವಿರುದ್ದ ಸೆಪ್ಟೆಂಬರ್ 10ನೇ ತಾರೀಕಿನಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಭಾರತೀಯ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ದೌರ್ಜನ್ಯ ಸಮಿತಿ ಸದಸ್ಯರಾದ ಒಬದೇನಹಳ್ಳಿ ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಹಲವು ವರ್ಷಗಳ ಹೋರಾಟಕ್ಕೆ ಪ್ರತಿಫಲವಾಗಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಒಳ ಮೀಸಲಾತಿ ಜಾರಿಗೊಳಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಧುಸ್ವಾಮಿಯವರ ನೇತೃತ್ವದಲ್ಲಿ ಒಳ ಮೀಸಲಾತಿ ಕುರಿತು ಎಡಗೈ ಸಮುದಾಯಕ್ಕೆ 6%, ಬಲಗೈ ಸಮುದಾಯಕ್ಕೆ 5.5%, ಭೋವಿ,ಕೊರಚಾ, ಕೊರಮ, ಲಂಬಾಣಿ ಸೇರಿದಂತೆ ಇತರೆ ಸಮುದಾಯಗಳಿಗೆ 4.5 %, ಹಾಗೂ ಅಲೆಮಾರಿ ಸಮುದಾಯಕ್ಕೆ 1 % ನೀಡುವಂತೆ ಸಮಿತಿ ಶಿಫಾರಸ್ಸು ಮಾಡಿತ್ತು. ಸಮಿತಿಯ ಶಿಫಾರಸ್ಸನ್ನು ಯಥಾವತ್ತಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಕೂಡ ಸರ್ಕಾರಕ್ಕೆ ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು . ಅಲ್ಲದೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಯಾವುದೇ ಶಿಫಾರಸ್ಸುಗಳನ್ನು, ಆದೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದಂತೆ ಒಳ ಮೀಸಲಾತಿ ಜಾರಿಗೊಳಿಸಿದ್ದು ಪರಿಶಿಷ್ಟ ಸಮುದಾಯಗಳ ನಡುವೆ ಗೊಂದಲಕ್ಕೆ ಕಾರಣವಾಗಿದೆ.
ಈ ಒಳ ಮೀಸಲಾತಿ ಜಾರಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ ಕಾರಣ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ 1% ಒಳ ಮೀಸಲಾತಿ ನೀಡಬೇಕಿದೆ. ಈ ಕುರಿತುಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು
ಬೋವಿ ಸಮಾಜ ಒಳಗೊಂಡಂತೆ ಇತರ ಸಮುದಾಯಗಳಿಗೆ ಕನಿಷ್ಠ ಪಕ್ಷ ಶೇಕಡಾ 6 ಒಳ ಮೀಸಲಾತಿ ಜಾರಿಗೊಳಿಸಬೇಕಿದೆ.ನಮ್ಮ ಭೋವಿ ಸಮುದಾಯದ ಜೊತೆಗೆ ಸುಮಾರು 59 ಉಪಜಾತಿಗಳನ್ನು ಸೇರಿಸಲಾಗಿದೆ. ಪ್ರಸ್ತುತ ಎಡಗೈ ಹಾಗೂ ಬಲಗೈ ಸಮುದಾಯಗಳಿಗೆ ನೀಡಿರುವ ಮೀಸಲಾತಿಯನ್ನು ನಾವು ಸ್ವಾಗತಿಸುತ್ತೇವೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ತಳ ಸಮುದಾಯಗಳಿಗೆ ಜನಸಂಖ್ಯೆ ಆದರದ ಮೇಲೆ ಈಗ ನಿಗದಿ ಮಾಡಿರುವ ಮೀಸಲಾತಿಯನ್ನು ಶೇಕಡಾ ಒಂದರಷ್ಟು ಹೆಚ್ಚಳ ಮಾಡಿ ತೀರಾ ಕೆಳ ಸಮುದಾಯಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕೆಂದು ನಮ್ಮ ಒತ್ತಾಯವಿದೆ ಎಂದು ಓಬದೇನಹಳ್ಳಿ ಮುನಿಯಪ್ಪ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕೊರಮ ಕೊರಚ ಸಮುದಾಯದ ಮುಖಂಡ ಬಿ ಜಿ ಗೋವಿಂದ ರಾಜು, ಭೋವಿ ಸಮುದಾಯದ ಮುಖಂಡಬಸವರಾಜು, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಮಾರುತಿ,ಲಂಬಾಣಿ ಸಮುದಾಯದ ಮುಖಂಡ ಅಂಜನಾ ನಾಯಕ್, ಮಂಜುನಾಥ್ ನಾಯಕ್ ಸೇರಿದಂತೆ ಕೊರಮ, ಕೊರಚ, ಲಂಬಾಣಿ, ಅಲೆಮಾರಿ ಸಮುದಾಯದ ಹಲವರು ಮುಖಂಡರು ಹಾಜರಿದ್ದರು.