ಗಣಪತಿ ಬಿಡಲು ಹೋದ 14 ವರ್ಷದ ವಿದ್ಯಾರ್ಥಿ ಸಾ*ವು

ತಿಪಟೂರು: ಗಣೇಶ ಹಬ್ಬದ ಸಂಭ್ರಮ ಹೊನ್ನವಳ್ಳಿ ಗ್ರಾಮದಲ್ಲಿ ದುಃಖಾಂತವಾಗಿ ಅಂತ್ಯ ಕಂಡಿದೆ. 14 ವರ್ಷದ ಬಾಲಕ ಜೀವನ್ ಕೆರೆಯಲ್ಲಿ ಈಜಾಡುವ ವೇಳೆ ನೀರುಪಾಲಾಗಿ ಸಾವನ್ನಪ್ಪಿದ್ದಾನೆ.

ಯಲ್ಲಮ್ಮನ ದೇವಸ್ಥಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ, ನಿನ್ನೆ ಬೆಳಿಗ್ಗೆ(06/09/2025) 10 ಗಂಟೆಯಲ್ಲಿ ಹಬ್ಬದ ವಿಸರ್ಜನೆ ಕಾರ್ಯಕ್ರಮದ ಬಳಿಕ, ಹೊನ್ನವಳ್ಳಿ ಗ್ರಾಮದ ಸಮೀಪದ ಏರಿಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇತ್ತೀಚೆಗೆ ಕೆರೆಯ ಉಳು ತೆಗೆದ ಕಾರಣ, ಕೆರೆಯ ಆಳವು 20 ಅಡಿಗೆ ಹೆಚ್ಚಾಗಿದ್ದು, ಜೀವನ್ ಆಳದ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳೀಯರು ನೀರಿನಲಿ ಮುಳುಗಿದ್ದ ಜೀವನನ್ನು ನೀರಿನಿಂದ ಹೊರತೆಗೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅತಿ ಹೆಚ್ಚು ನೀರು ಕುಡಿದು ಸಾವನ್ನಪ್ಪಿದ್ದಾನೆ. ತಿಪಟೂರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಿ.ದೇಹವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ .

ಜೀವನ್ ಹೊನ್ನವಳ್ಳಿ ಸರ್ಕಾರಿ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದ. ತಂದೆ-ತಾಯಿಯಿಂದ ದೂರವಾಗಿ ಅತ್ತೆ ಲಕ್ಷ್ಮಮ್ಮ ಅವರ ಮನೆಯಲ್ಲಿ ಬೆಳೆದು ಓದುತ್ತಿದ್ದ ಜೀವನ್, ಬಾಲ್ಯದಿಂದಲೇ ಅತ್ತೆಯ ಪ್ರೀತಿಯ ಮಗನಾಗಿದ್ದ. ಲಕ್ಷ್ಮಮ್ಮ ಅವರಿಗೆ ಗಂಡುಮಕ್ಕಳಿಲ್ಲದೆ, ಜೀವನ್ ಅವರನ್ನು ಪ್ರೀತಿಯಿಂದ ಸಾಕಿ ಬೆಳೆಸಿದ್ದರು.

ಮೃತ ಜೀವನ್ ತಂದೆ ಅನಿಲ್ (ಹೆಸರು ಬದಲಾಯಿಸಲಾಗಿದೆ), ತಾಯಿ ಸುಮಾ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗ ಜೀವನ್ (14) ಈ ದುರ್ಘಟನೆಯಲ್ಲಿ ಮೃತಪಟ್ಟರೆ, ಇನ್ನೊಬ್ಬ ಮಗ ಪವನ 5ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಗಣೇಶ ಹಬ್ಬದ ಸಂಭ್ರಮವನ್ನೇ ದುಃಖಾಂತವಾಗಿ ಪರಿವರ್ತಿಸಿದ ಈ ಘಟನೆ ಪೋಷಕರ ಹಾಗೂ ಬಂಧುಗಳ ಮನ ಕಲುಕಿದೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮವೆಲ್ಲಾ ಶೋಕದಲ್ಲಿ ಮುಳುಗಿದೆ.

ಮೃತ ಜೀವನ್ ಅವರ ಅಂತ್ಯಕ್ರಿಯೆ ಇಂದು ಸ್ವಂತ ಊರಾದ ಹಾಸನ ಜಿಲ್ಲೆಯ ಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ವರದಿ : ಭರತ್ ಕೆ