ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸ್ಮರಣಾoಜಲಿ.
ದೊಡ್ಡಬಳ್ಳಾಪುರ:ಪುಲ್ವಾಮಾ ದಾಳಿಯಲ್ಲಿ ದೇಶಕ್ಕಾಗಿ ಮಡಿದ ಯೋಧರ ಸವಿನೆನಪಿನಲ್ಲಿ ಮಾಜಿ ಅರೇಸೇನಾಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು ಸದರಿ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೇರಿದಂತೆ ರಾಜ್ಯದ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ಐಜಿ ಅರ್ಕೇಶ್ ತಿಳಿಸಿದರು.
ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಯಲಹಂಕದಲ್ಲಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೂ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮವನ್ನು ಗ್ರೂಪ್ ಸೆಂಟರ್, ಸಿ ಆರ್ ಪಿ ಎಫ್ ಕ್ಯಾಂಪಸ್ ದೊಡ್ಡಬಳ್ಳಾಪುರ ರಸ್ತೆ ,ಯಲಹಂಕ ಬೆಂಗಳೂರು ಇಲ್ಲಿ ಆಯೋಜನೆ ಮಾಡಲಾಗಿದೆ .
ದೇಶಕ್ಕಾಗಿ 24 ಗಂಟೆಗಳ ಸೇವೆ ಸಲ್ಲಿಸುವ ಅರೇಸೇನಾ ಪಡೆಗಳ ಕುಂದು ಕೊರತೆಗಳು ಸಾಕಷ್ಟಿವೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲು ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಅರೆಸೇನಾ ಪಡೆಗಳ ಯೋಧರ ಸ್ಮರಣಾರ್ಥವಾಗಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಭೂಸೇನೆ ,ವಾಯು ಸೇನೆ ಹಾಗೂ ನೌಕಾ ಸೇನೆಗೆ ಸಿಗುವ ಸೌಲಭ್ಯಗಳು ಅರೆಸೇನಾ ಪಡೆಗಳಿಗೆ ಸಿಗುತ್ತಿಲ್ಲ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ, ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಿಗೆ ಪರದಾಡುವ ಪರಿಸ್ಥಿತಿ ಅರೆಸೇನಾಪಡೆಯ ಯೋಧರಿಗೆ ಎದುರಾಗಿದೆ . ಈ ಕುರಿತು ಸರ್ಕಾರದ ಮಟ್ಟದಲ್ಲಿ ಅರೆಸೇನಾ ಪಡೆಗಳ ಯೋಧರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಬೋರ್ಡ್ ವ್ಯವಸ್ಥೆಯಾಗಬೇಕಿದೆ. ಕೇವಲ ಸೌಲಭ್ಯಕ್ಕಾಗಿ ಅಲ್ಲದೆ ದೇಶ ಸೇವೆ ಸಲ್ಲಿಸಿರುವ ಯೋಧರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವಲ್ಲಿ ಸರ್ಕಾರ ಶ್ರಮಿಸಬೇಕಿದೆ ಈ ಕುರಿತು ನಮ್ಮ ಬೃಹತ್ ಸಮಾವೇಶದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಿದ್ದೇವೆ ಎಂದು ತಿಳಿಸಿದರು
ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ಮಾತನಾಡಿ ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಮಾಜಿ ಯೋಧರು ಭಾಗವಹಿಸುವ ನಿರೀಕ್ಷೆಯಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ, ಸರ್ಕಾರಕ್ಕೆ ನಮ್ಮ ಬೇಡಿಕೆ ಹಾಗೂ ಒತ್ತಾಯಗಳನ್ನು ಮಂಡಿಸಲಿದ್ದೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಿಟ್ಟ ಯೋಧರ ಕುಂದು ಕೊರತೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ಮಾತನಾಡಿ ಈ ಕಾರ್ಯಕ್ರಮವು ವಿಶೇಷವಾಗಿದ್ದು ಇದು ಕೇವಲ ಪುಲ್ವಾಮ ದಾಳಿಯಲ್ಲಿ ಹುತಾತ್ಮರ ಯೋಧರಿಗೆ ಅಷ್ಟೇ ಅಲ್ಲದೆ ಈವರೆಗೂ ದೇಶಕ್ಕೆ ಸೇವೆ ಸಲ್ಲಿಸಿ ಹುತಾತ್ಮರಾಗಿರುವ 35,000 ಯೋಧರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರೇಸೇನಾ ಪಡೆಗಳಿಗೆ ಪ್ರತ್ಯೇಕ ಬೋರ್ಡ್ ಘೋಷಣೆ ಮಾಡಿದ್ದರು ಕಾರಣಾಂತರಗಳಿಂದ ಆ ಬೋರ್ಡ್ ತೆಗೆಯಲಾಗಿದೆ. ಅರೆಸೇನಾ ಪಡೆಗಳಿಗೆ ಘೋಷಣೆ ಮಾಡಿದ್ದ ಪ್ರತ್ಯೇಕ ಬೋರ್ಡನ್ನು ಮರು ಸ್ಥಾಪಿಸುವಂತೆ ಈ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಯೋಧರಾದ ನರಸಿಂಹಮೂರ್ತಿ, ಕೃಷ್ಣಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.