ಬೆಂಗಳೂರು ಗ್ರಾಮಾಂತರ ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ವಿ. ಪುರುಷೋತ್ತಮ್ ಗೌಡ ನೇಮಕ

ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣಕ್ಕೆ ಅಧ್ಯಕ್ಷರನ್ನಾಗಿ ದೊಡ್ಡಬಳ್ಳಾಪುರದ ವಿ. ಪುರುಷೋತ್ತಮ್ ಗೌಡರನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ. ನಾರಾಯಣ ಗೌಡರು ನೇಮಕ ಮಾಡಿದ್ದಾರೆ.
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಪುರುಷೋತ್ತಮ ಗೌಡರು ಪತ್ರಿಕೆ ಯೊಂದಿಗೆ ಮಾತನಾಡಿ ದೊಡ್ಡಬಳ್ಳಾಪುರ ತಾಲೂಕು ಕರವೇ ಅಧ್ಯಕ್ಷನಾಗಿದ್ದ ನಾನು ನಾಡು ನುಡಿ ವಿಚಾರದಲ್ಲಿ ಹೋರಾಟಕ್ಕೆ ಸದಾ ಸಿದ್ದ. ನಾಮಫಲಕದಲ್ಲಿ ಕನ್ನಡ ಬಳಕೆ ವಿಚಾರವಾಗಿ ನಡೆದ ಹೋರಾಟದಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದ್ದೆ. ಜೊತೆಗೆ ಕರವೇ ಗುಂಪಿನ ಎಲ್ಲರನ್ನು ಒಗ್ಗೂಡಿಸಿ ತಾಲೂಕಿನಲ್ಲಿ ಕರವೇ ಕ್ರಿಯಾ ಶೀಲವಾಗುವಂತೆ ನನ್ನದೊಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ. ಈಗ ನನ್ನ ಗುರುಗಳು ಹಾಗೂ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ನನ್ನನ್ನು ಗುರುತಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನಾರಾಯಣ ಗೌಡರಿಗೆ ನಾನು ಅಭಾರಿಯಾಗಿದ್ದೇನೆ. ಅವರ ಆಶಯಕ್ಕೆ ಕಿಂಚಿತ್ತೂ ಲೋಪ ಬಾರದ ರೀತಿಯಲ್ಲಿ ಸಂಘಟನೆಗಾಗಿ ಶ್ರಮಿಸುತ್ತೇನೆ. ಮುಖ್ಯವಾಗಿ ನನ್ನ ಆಯ್ಕೆಗೆ ಸಹಕರಿಸಿದ, ಪ್ರತಿ ಹಂತದಲ್ಲೂ ನನಗೆ ಹೋರಾಟಗಳಲ್ಲಿ ಹಾಗೂ ಸಂಘಟನೆ ವಿಚಾರದಲ್ಲಿ ಮಾರ್ಗದರ್ಶನ ನೀಡಿದ ಕರವೇ ರಾಜ್ಯ ಉಪಾಧ್ಯಕ್ಷರಾದ ಪುಟ್ಟೇಗೌಡರು ಹಾಗೂ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣಮ್ಮನವರನ್ನು ಸ್ಮರಿಸುತ್ತೇನೆ. ಹಾಗೂ ರಾಜ್ಯ ಪದಾಧಿಕಾರಿಗಳು ದೊಡ್ಡಬಳ್ಳಾಪುರ ತಾಲೂಕಿನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಕರವೇ ಗುಂಪಿನ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಪುರುಷೋತ್ತಮ್ ಗೌಡ ಹೇಳಿದ್ದಾರೆ.