ಹೂವಿನ ಬೆಳೆಗೆ ಹಾಕಿದ್ದ ಡ್ರಿಪ್ ಪೈಪ್ ಹೊಡೆದು ಹಾಕಿದ ಕಿಡಿಗೇಡಿಗಳು
ದೊಡ್ಡಬಳ್ಳಾಪುರ: ಹೂವಿನ ಬೆಳೆಗೆ ಅಳವಡಿಸಿದ್ದ ಡ್ರಿಪ್ ಪೈಪ್ ಹೊಡೆದು ಹಾಕಿ, ಸೇವಂತಿಗೆ ಹೂವಿನ ಸಸಿಗಳನ್ನು ನಾಶ ಮಾಡಿರುವ ಘಟನೆ ತಾಲೂಕಿನ ಕೆಳಗಿನಜೂಗಾನ ಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಗ್ರಾಮದ ರೈತ ಗಂಗಪ್ಪ ಅವರು ತಮ್ಮ ಜಮೀನಿನಲ್ಲಿ ತಿಂಗಳ ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಸೇವಂತಿಗೆ ಹಾಗೂ ಬಟನ್ಸ್ ಹೂವಿನ ಸಸಿಗಳನ್ನು ನಾಟಿ ಮಾಡಿದ್ದರು.
ರೈತ ಗಂಗಪ್ಪ ಅವರ ತೋಟ ಗ್ರಾಮದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿದ್ದು, ಈ ಭಾಗದಲ್ಲಿ ಚಿರತೆ ಕಾಟವೂ ಇದೆ ಎನ್ನಲಾಗಿದೆ. ಚಿರತೆ ಕಾಣಕ್ಕೆ ಹೆದರಿ ರಾತ್ರಿ ತಡವಾಗಿ ತೋಟದ ಬಳಿ ಬಂದಿದ್ದಾರೆ. ಬೆಳಿಗ್ಗೆ ಎದ್ದು ನೋಡಿದಾಗ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಹೂವಿನ ಬೆಳೆಗೆ ಹಾಕಿದ್ದ ಡ್ರಿಪ್ ಪೈಪ್ ಗಳನ್ನು ಅಲ್ಲಲ್ಲಿ ಹೊಡೆದು ಹಾಕಿದ್ದು, ಸೇವಂತಿಗೆ ಮತ್ತು ಬಟನ್ಸ್ ಸಸಿಗಳನ್ನು ನಾಶಪಡಿಸಿದ್ದಾರೆ.
ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಹೂವಿನ ಬೆಳೆ ನಾಶಮಾಡಿ, ಡ್ರಿಪ್ ಪೈಪ್‌ಗಳನ್ನು ಹೊಡೆದು ಹಾಕಿದ್ದಾರೆ. ಇಂದು ಬೆಳಿಗ್ಗೆ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ.
ರೈತ ಗಂಗಪ್ಪ ಮಾತನಾಡಿ ಒಂದು ಸಸಿಗೆ ಮೂರು ರೂಪಾಯಿ ಕೊಟ್ಟು ತಂದಿದ್ದೆ. ಈಗ ಕಿಡಿಗೇಡಿಗಳ ಕೃತ್ಯಕ್ಕೆ ಎಲ್ಲವೂ ನಾಶವಾಗಿದೆ. ಈಗ ಹೊಸದಾಗಿ ಡ್ರಿಪ್ ಪೈಪ್ ಅಳವಡಿಸಲು ಆಗುವುದಿಲ್ಲ, ಬೇಸಿಗೆ ಕಾಲದಲ್ಲಿ ಸಸಿಗಳಿಗೆ ನೀರು ಹಾಯಿಸದಿದ್ದರೆ ಬೆಳೆ ನಾಶ ಆಗುತ್ತದೆ. ಇದರಿಂದ ನನಗೆ ಸಾಕಷ್ಟು ನಷ್ಟವಾಗುವ ಸಂಭವವಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಇತ್ತೀಚೆಗೆ ಇದೇ ತೋಟದಲ್ಲಿ ಪಂಪ್ ಮತ್ತು ಮೋಟರ್ ಹಾಗೂ ಕೇಬಲ್ ಕಳವಾಗಿತ್ತು. ಇದೀಗ ಡ್ರಿಪ್ ಪೈಪ್ ಹೊಡೆದು, ಸೇವಂತಿಗೆ ಸಸಿಗಳನ್ನು ನಾಶ ಮಾಡಿರುವುದು ನನಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಕಿಡಿಗೇಡಿಗಳ ಈ ಕೃತ್ಯದಿಂದಾಗಿ ತೋಟದಲ್ಲಿ ಉಳಿದುಕೊಳ್ಳಲು ಭೀತಿ ಎದುರಾಗಿದೆ. ನಮಗೆ ನ್ಯಾಯ ಮತ್ತು ರಕ್ಷಣೆ ಬೇಕಾಗಿದೆ ಎಂದು ಅಲವತ್ತುಕೊಂಡರು.