ಬೈಕ್ ಗಳು ಮುಖಾಮುಖಿ ಡಿಕ್ಕಿ ಸವಾರರಿಗೆ ಗಂಬೀರ ಗಾಯ

 

ದೊಡ್ಡಬಳ್ಳಾಪುರ: ತಾಲೂಕಿನ ಬೀಡಿಕೆರೆ ಹಾಗೂ ಮುಕ್ಕೇನಹಳ್ಳಿ ಕ್ರಾಸ್ ನಡುವೆ ಭಾನುವಾರ ಮಧ್ಯಾಹ್ನ ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಾಳು ಬೈಕ್ ಸವಾರರನ್ನು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಗೌಚೇನಹಳ್ಳಿ ಹಾಗೂ ಶಿಡ್ಲಘಟ್ಟದವರು ಎಂದು ಹೇಳಲಾಗಿದೆ.

ಬೈಕ್ ಸವಾರರ ಪೈಕಿ ಒಬ್ಬರಿಗೆ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ಮತ್ತೊಬ್ಬ ಸವಾರನ ಕಾಲಿನ ಮೂಳೆ ಮುರಿದಿದೆ. ಅಪಘಾತದಿಂದ ತೀವ್ರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರರನ್ನು ದೊಡ್ಡಬಳ್ಳಾಪುರದ ಪತ್ರಕರ್ತ ಕೊತ್ತೂರಪ್ಪ ಅವರ ಸ್ನೇಹಿತರಾದ ವಡ್ಡರಪಾಳ್ಯ ನಾರಾಯಣಪ್ಪ ಹಾಗೂ ಸ್ಥಳೀಯರು ಉಪಚರಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

108 ಅಲಭ್ಯ: ಖಾಸಗಿ ಅಂಬುಲೆನ್ಸ್ ಪ್ರತ್ಯಕ್ಷ

ಅಪಘಾತ ಸಂಭವಿಸುತ್ತಲೇ ಸ್ಥಳದಲ್ಲಿದ್ದವರು 108 ಅಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆದರೆ, ಆ ಸಿಬ್ಬಂದಿ ಖಾಸಗಿ ಅಂಬುಲೆನ್ಸ್ ಕಳುಹಿಸಿಕೊಟ್ಟು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಗಾಯಾಳುಗಳ ಪೋಷಕರು ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ ಹೆದರುವಂತಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ಅಪಘಾತ ಸಂಭವಿಸುವ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆ ಅಂಬುಲೆನ್ಸ್ ಗಳೇ ಬರುತ್ತಿದ್ದು, 108 ಅಂಬುಲೆನ್ಸ್ ಸಿಬ್ಬಂದಿ, ಖಾಸಗಿ ಆಸ್ಪತ್ರೆಗಳ ಜೊತೆ ಹೊಂದಾಣಿಕೆ| ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಣ್ಣಪುಟ್ಟ ಗಾಯಗಳಾಗಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೆಪದಲ್ಲಿ ಸುಲಿಗೆ ಮಾಡಲಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿಗಳು 108 ಅಂಬುಲೆನ್ಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ಸೂಕ್ತ ಸಮಯದಲ್ಲಿ ಸ್ಪಂದಿಸುವಂತೆ ನಿರ್ದೇಶನ ನೀಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಸಹಕರಿಸುತ್ತಿರುವ 108 ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.