ಶಾಂತಿಯುತವಾಗಿ ಹಬ್ಬ ಆಚರಿಸಿ ಕಾನೂನು ಸುವ್ಯವಸ್ಥೆ ಕಾಪಾಡಿ –ಅಮರೇಶ್ ಗೌಡ
ದೊಡ್ಡಬಳ್ಳಾಪುರ : ಗೌರಿ ಗಣೇಶ ಹಬ್ಬದ ಹಿನ್ನೆಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣ ಇನ್ಸ್ಪೆಕ್ಟರ್ ಅಮರೇಶ್ ಗೌಡ ಸಾರ್ವಜನಿಕರಿಗೆ ಒಂದಿಷ್ಟು ಮಾಹಿತಿ ನೀಡಿದ್ದು, ಶಾಂತಿಯುತವಾಗಿ ಹಬ್ಬದ ಆಚರಣೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು ಪೊಲೀಸ್ ಇಲಾಖೆ, ನಗರಸಭೆ,ಬೆಸ್ಕಾಂ, ಹಾಗೂ ಅಗ್ನಿಶಾಮಕದಳದ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಏಕಗವಾಕ್ಷಿ (singlewindow) ವ್ಯವಸ್ಥೆ ಮಾಡಲಾಗಿದ್ದು. ಎಲ್ಲ ಇಲಾಖೆಗಳ ಅನುಮತಿಯನ್ನು ಸಾರ್ವಜನಿಕರು ಒಂದೆಡೆಯೇ ಪಡೆಯುವಂತೆ ಯೋಜನೆ ರೂಪಿಸಲಾಗಿದೆ. ಈ ಹಿಂದೆ ಪ್ರತಿ ಇಲಾಖೆಗೂ ಪ್ರತ್ಯೇಕವಾಗಿ ಅಫಿಡವಿಟ್ ಹಾಗೂ ದಾಖಲೆಗಳನ್ನು ಸಾರ್ವಜನಿಕರು ಸಲ್ಲಿಸಬೇಕಿತ್ತು ಆದರೆ ಪೋಲಿಸ್ ಅಧಿಕ್ಷಕರು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಸಿಂಗಲ್ ವಿಂಡೋ ಪದ್ಧತಿಯನ್ನು ಆಯೋಜನೆ ಮಾಡಲಾಗಿದೆ ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಕ್ಯೂಆರ್ ಸ್ಕ್ಯಾನ್ ಮಾಡುವ ಮೂಲಕ ಅನುಮತಿ ಪಡೆಯಲು ಸಲ್ಲಿಸಬೇಕಾಗಿರುವ ಅಗತ್ಯ ದಾಖಲಾತಿಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ನಿಗದಿತ ಶುಲ್ಕ ಪಾವತಿ ಮಾಡಿ ತ್ವರಿತ ಗತಿಯಲ್ಲಿ ಅನುಮತಿ ಪಡೆಯಬಹುದಾಗಿದೆ ಎಂದರು.
ಗಣೇಶ ಪ್ರತಿಷ್ಠಾಪನೆಗೆ ಮುಖ್ಯವಾಗಿ ಅನುಸರಿಸಬೇಕಾದ ಕ್ರಮಗಳು
*ಕಾರ್ಯಕ್ರಮ ಆಯೋಜನೆ ಮಾಡುವ ಸ್ಥಳ ಯಾವುದು ವಿವಾದಕ್ಕೆ ಒಳಗಾಗಿರಬಾರದು.
* ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಯೋಜನೆ ಮಾಡುವುದಾದರೆ ಸಾರ್ವಜನಿಕರ ಸಂಚಾರಕ್ಕೆ ಹಾಗೂ ಶಾಲಾ ಕಾಲೇಜುಗಳಿಗೆ ತೊಂದರೆಯಾಗದಂತಿರಬೇಕು
* ಖಾಸಗಿ ಸ್ಥಳದಲ್ಲಿ ಕಾರ್ಯಕ್ರಮ ಯೋಜನೆ ಮಾಡುವುದಾದರೆ ಸದರಿ ಸ್ಥಳದ ಮಾಲೀಕರಿಂದ ಅನುಮತಿ ಪತ್ರ ಪಡೆಯಬೇಕು ಹಾಗೂ ಮಾಲೀಕರ ದಾಖಲಾತಿಗಳನ್ನು ಸಲ್ಲಿಸಬೇಕು.
* ಗಣೇಶ ಪ್ರತಿಷ್ಠಾಪನ ಸ್ಥಳದಲ್ಲಿ ಹಗಲು ಮತ್ತು ರಾತ್ರಿ ಪಾಳಿಯದಲ್ಲಿ ಸ್ವಯಂ ಸೇವಕರು ಕಾವಲು ಇರುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು.
* ಕಾರ್ಯಕ್ರಮದ ಸ್ಥಳದಲ್ಲಿ ವಿವಾದಿತ ಬ್ಯಾನರ್ ಗಳು, ಅಶ್ಲೀಲ ನೃತ್ಯ, ಅಶ್ಲೀಲ ಹಾಡುಗಳನ್ನು ಹಾಕುವುದು ನಿರ್ಬಂಧಿಸಿದೆ.
* ಬೆಳಿಗ್ಗೆ 6:00ಯಿಂದ ರಾತ್ರಿ 10:00 ವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ 10:00 ನಂತರ ಯಾವುದೇ ಕಾರಣಕ್ಕೂ ಧ್ವನಿವರ್ಧಕ ಬಳಸುವಂತಿಲ್ಲ
* ಸರ್ಕಾರದ ಆದೇಶದಂತೆ ಡಿಜೆ ಬಳಸುವಂತಿಲ್ಲ, ಈ ಕುರಿತು ನಿರ್ಬಂಧ ಹೇರಲಾಗಿದೆ
* ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗದ ಸ್ಥಳಗಳಲ್ಲಿ, ಹಸಿರು ಪಟಾಕಿ ಬಳಸಲು ಅವಕಾಶ ಕಲ್ಪಿಸಲಾಗಿದೆ.
* ಗಣೇಶ ಮೂರ್ತಿ ವಿಸರ್ಜನೆಯನ್ನು ರಾತ್ರಿ 10 ಗಂಟೆ ಒಳಗೆ ನಿಗದಿತ ಪ್ರದೇಶದಲ್ಲಿ ನೆರವೇರಿಸುವಂತೆ ಸೂಚಿಸಲಾಗಿದೆ
* ಕಾರ್ಯಕ್ರಮವನ್ನು ಅನ್ಯಧಾರ್ಮಿಯರಿಗೆ ತೊಂದರೆಯಾಗದಂತೆ,ನೆರವೇರಿಸುವ ಮೂಲಕ ಸಹಕರಿಸಲು ಕೋರಿದ್ದಾರೆ.