*ಜಿಲ್ಲಾಡಳಿತ ಭವನದಲ್ಲಿ ವಿಶ್ವವಿಕಲಚೇತನರ ದಿನಾಚರಣೆ*
*ವಿಕಲಚೇತನರಿಗೆ ಉಚಿತ ಕಾನೂನು ನೆರವು:ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ*
ಬೆಂಗಳೂರು ಗ್ರಾಮಾಂತರ ಜಿಲ್ಲೆ:
ಕಾನೂನು ಸೇವಾ ಪ್ರಾಧಿಕಾರಕ್ಕೆ ಸಬಂಧಪಟ್ಟಂತೆ ಎಲ್ಲಾ ವಿಕಲಚೇತನರಿಗೂ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಶೈಲ್ ಭೀಮಸೇನ ಬಾಗಡಿ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು
ರಾಷ್ಟ್ರೀಯ ಕಾನೂನು ಸೇವಾ ಅಧಿನಿಯಮ 1987 ಕಾಲಂ 12ರಡಿಯಲ್ಲಿ ಎಲ್ಲಾ ವಿಕಲಚೇತನರಿಗೂ ಉಚಿತ ಕಾನೂನು ಅರಿವು ನೆರವು ನೀಡಲಾಗುತ್ತದೆ. ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದು ಕಛೇರಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಸಹಾಯವಾಣಿ 15100 ಕರೆ ಮಾಡಬಹುದು.ಸರ್ಕಾರಿ ಸೌಲಭ್ಯ ಪಡೆಯಲು ಕಚೇರಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ಕಾನೂನು ಸೇವಾ ಸಮಿತಿಯಿಂದ ಅರೆಕಾಲಿಕ ನ್ಯಾಯಿಕ ಸ್ವಯಂ ಸೇವಕರು ಮನೆ ಬಾಗಿಲಿಗೆ ಬಂದು ನಿಮ್ಮ ಅರ್ಜಿಗಳನ್ನು ಇಲಾಖೆಗೆ ಅರ್ಜಿ ಸಲ್ಲಿಸಿ ಕಾಲಕಾಲಕ್ಕೆ ಮಾಹಿತಿ ನೀಡುತ್ತಾರೆ.
ಕೇಂದ್ರ ಸರ್ಕಾರವು 2016ರಲ್ಲಿ ವಿಕಲಚೇತನರ ಹಕ್ಕುಗಳನ್ನು ಕಾಪಾಡಲು ಕಾನೂನನ್ನು ಜಾರಿಗೆ ತಂದಿದೆ. ಜನಸಾಮಾನ್ಯರಿಗೆ ಕಾಯಿದೆಯ ಬಗ್ಗೆ ತಿಳುವಳಿಕೆಯಿಲ್ಲದ ಕಾರಣ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿರುವುದಿಲ್ಲ.ಈ ಕಾಯಿದೆ ಪ್ರಕಾರ ಸರ್ಕಾರಿ ನೇಮಕಾತಿಗಳಲ್ಲಿ 4% ಮೀಸಲಾತಿ ನೀಡಬೇಕು. ಶಾಲೆಗಳಲ್ಲಿ 5% ಮೀಸಲಾತಿ ವಿಕಲ ಚೇತನರ ಮಕ್ಕಳಿಗೆ ನೀಡಬೇಕು.ಯಾವುದೇ ಸರ್ಕಾರಿ, ಖಾಸಗಿ ಕಟ್ಟಡಗಳ ಕಛೇರಿಗಳಲ್ಲಿ ವಿಕಲಚೇತನರಿಗೆ ವ್ಹೀಲ್ ಚೇರ್ ನೀಡಬೇಕಾಗುತ್ತದೆ. ಕಾನೂನು ಹಾಗೂ ಅದರ ಸದುಪಯೋಗದ ಕುರಿತು ವಿಸ್ತಾರವಾಗಿ ಮಾಹಿತಿ ಹಂಚಿಕೊಂಡರು.
ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ ಈ ದಿನದ ವಿಕಲಚೇತನರ ದಿನಾಚರಣೆಯನ್ನು ವಿಶ್ವಸಂಸ್ಥೆಯು ಸಾಮಾಜಿಕ ಪ್ರಗತಿಯನ್ನು ಮುನ್ನೆಡಸಲು ಅಂಗವಿಕಲರನ್ನೊಳಗೊಂಡ ಸಮಾಜವನ್ನು ಪೋಷಿಸುವುದು ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲಾ ವಿಕಲಚೇನರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಕಾರ್ಯ ಕ್ರಮವನ್ನು ನಡೆಸಲಾಗುತ್ತದೆ. ಹಿರಿಯ ನಾಗರೀಕರಿಗೆ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಹಿರಿಯ ನಾಗರೀಕರಿಗೆ ವಿಕಲಚೇತನರಿಗೆ ಸಿಎಸ್ಆರ್ ವತಿಯಿಂದ ಅನುದಾನ ನೀಡಲಾಗುತ್ತಿದೆ.ಜಿಲ್ಲಾ ವ್ಯಾಪ್ತಿಯಲ್ಲಿ ಹಿರಿಯ ನಾಗರೀಕರಿಗೆ ವಿಶೇಷ ಶಿಬಿರಗಳನ್ನು ನಡೆಸಲಾಗಿದೆ. ವಿಶೇಷ ಚೇತನರು ತಮ್ಮಲ್ಲಿರುವ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಹೆಚ್ಚು ಹೆಚ್ಚು ಸರ್ಕಾರಿ ಹುದ್ದೆಗಳಲ್ಲಿ ಬರಲು ಪ್ರಯತ್ನಿಸಿ. ಸಹಾಯ ಮಾಡಲು ಜಿಲ್ಲಾಡಳಿತ ಸಿದ್ದವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರುಗಳಿಗೆ ಕಂಪ್ಯೂಟರ್ ನೀಡಲಾಯಿತು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮತ್ತು ವಿಕಲಚೇತನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು ಹಾಗೂ ವಿಕಲಚೇತನ ಮಕ್ಕಳಿಗೆ ವಿವಿಧ ಕ್ರೀಡೆ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ,ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಜಯಲಕ್ಷ್ಮಮ್ಮ, ಉಪಾಧ್ಯಕ್ಷರಾದ ಪಿ.ಮುನಿರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮುದ್ದಣ್ಣ. ಎಂ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ ಪಾಣಿ, ಜಿಲ್ಲಾ ನಿರೂಪಣ ಅಧಿಕಾರಿ ಅನಿತಾಲಕ್ಷ್ಮಿ, ತಾಲೂಕಿನ ಸಿಡಿಪಿಓಗಳು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಹಾಗೂ ವಿಶೇಷಚೇತನರು ಉಪಸ್ಥಿತರಿದ್ದರು.





