--ಜಾಹೀರಾತು--

ಡಿ.25 ರಂದು ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

On: December 3, 2025 10:04 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಡಿ.25 ರಂದು ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ*

*ಘಾಟಿ ಸುಬ್ರಮಣ್ಯ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ*

ಬೆಂ, ಗ್ರಾ, ಜಿಲ್ಲೆ :-

ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು ಡಿಸೆಂಬರ್ 10 ರಿಂದ ಪ್ರಾರಂಭವಾಗಲಿದ್ದು ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಸೆಂಬರ್ 10 ರಿಂದ 18 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. 25 ರಂದು ಬ್ರಹ್ಮರಥೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಅಧಿಕಾರಿಗಳು ಶ್ರಮ ವಹಿಸಬೇಕು ಎಂದರು.

ರಾಸುಗಳ ಜಾತ್ರೆಯು 10 ರಂದು ಆರಂಭವಾಗಲಿದ್ದು ವಿವಿಧ ಭಾಗಗಳಿಂದ ಸಾಕಷ್ಟು ರೈತರು, ಜಾನುವಾರುಗಳು ಆಗಮಿಸಲಿವೆ. ರಾಸುಗಳಿಗೆ ಕುಡಿಯುವ ನೀರು, ಮೇವು, ಲಸಿಕೆ, ಶೆಡ್ ಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ, ರೈತರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಸೂಚನಾ ಫಲಕ ಅಳವಡಿಸುವ ಮೂಲಕ ವಾಹನ ದಟ್ಟಣೆ ಆಗದಂತೆ ಕ್ರಮ ವಹಿಸಬೇಕು. ಬ್ರಹ್ಮ ರಥೋತ್ಸವ ದಿನ ಹೆಚ್ಚುವರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿ. ಸಾರ್ವಜನಿಕರು ಪಾರ್ಕಿಂಗ್ ಸ್ಥಳದಿಂದ ದೇವಾಲಯಕ್ಕೆ ತೆರಳಲು ಹಾಗೂ ಮರಳಲು ಉಚಿತ ವಾಹನ ವ್ಯವಸ್ಥೆ ಮಾಡಿ ಎಂದರು.

ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆ, ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಪೂರೈಸಿ ಹಾಗೂ ಹೆಚ್ಚುವರಿಯಾಗಿ ತಾತ್ಕಾಲಿಕ ಶೌಚಾಲಯಗಳನ್ನು ಒದಗಿಸಿ ಎಂದು
ಘಾಟಿ ದೇವಾಲಯದ ಅಧಿಕಾರಿಗಳಿಗೆ ಸೂಚಿಸಿದರು.

ದೇವಾಲಯದ ಸುತ್ತಮುತ್ತಲೂ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ನಗರಸಭೆಯಿಂದ ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ನೇಮಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು. ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರಗಳು ಹಾಗೂ ಬೈಕ್ ಅಂಬುಲೆನ್ಸ್ ಸೇವೆ ಒದಗಿಸುವಂತೆ ಆರೊಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಾತ್ರಾ ಮಹೋತ್ಸವದಲ್ಲಿ ಸೂಕ್ತ ಬಂದೋಬಸ್ತ್, ಭಧ್ರತೆ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

*ಅನಧಿಕೃತ ಜಾಹಿರಾತು ಫಲಕ, ಫುಟ್ ಪಾತ್ ಅಂಗಡಿಗಳು ತೆರವಿಗೆ ಸೂಚನೆ*
ಮಾಕಳಿ ಇಂದ ಘಾಟಿ ರಸ್ತೆಯ ವರೆಗೆ, ಕಂಟನಕುಂಟೆ ಮಾರ್ಗವಾಗಿ ಅನಧಿಕೃತವಾಗಿ ಜಾಹೀರಾತು ಫಲಕಗಳು ಅಳವಡಿಸಿರುವುದರಿಂದ ವಾಹನ ಓಡಾಟಕ್ಕೆ ತೊಂದರೆ ಆಗಲಿದ್ದು ತೆರವುಗೊಳಿಸಲು ಸೂಚಿಸಿದರು. ಜೊತೆಗೆ ದೇವಾಲಯದ ಸುತ್ತಲೂ ಫೂಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವು ಗೊಳಿಸಿ ಅವರಿಗೆ ಪರ್ಯಾಯ ಜಾಗ ಗುರುತಿಸಿ ಅಲ್ಲಿ ಅಂಗಡಿ ಮಳಿಗೆಗಳ ಸ್ಥಾಪಿಸಲು ಅನುಮತಿ ನೀಡಿ ಎಂದರು.

*ಸ್ಥಳೀಯ ಕಲಾವಿದರಿಗೆ ಆದ್ಯತೆ*
ಬ್ರಹ್ಮರಥೋತ್ಸವದ ಡಿಸೆಂಬರ್ 24, 25 ರಂದು ಹಾಗೂ ರಾಸುಗಳ ಜಾತ್ರಾ ಸಮಯದಲ್ಲಿ ಒಂದು ದಿನ ಒಟ್ಟು ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲು ತೀರ್ಮಾನಿಸಲಾಗಿದ್ದು. ಜಿಲ್ಲೆಯ ನಾಲ್ಕು ತಾಲ್ಲೂಕಿನ ಸ್ಥಳೀಯ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ. ಸ್ಥಳೀಯ ಕಲಾವಿದರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಘಾಟಿ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು.

ಸಭೆಯಲ್ಲಿ ಸಿಇಒ ಡಾ.ಕೆ.ಎನ್ ಅನುರಾಧ, ಎಸಿ ದುರ್ಗ ಶ್ರಿ, ಎಎಸ್ಪಿ ನಾಗರಾಜ್, ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್, ದೊಡ್ಡಬಳ್ಳಾಪುರ ತಹಶೀಲ್ದಾರ್ ಮಲ್ಲಪ್ಪ, ಇಒ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.