ಮೇ 1ರಿಂದ ಕೆ. ಆರ್. ಎಸ್. ವತಿಯಿಂದ ಲಂಚ ಮುಕ್ತ ಅಭಿಯಾನ– ಶಿವ ಶಂಕರ್
ದೊಡ್ಡಬಳ್ಳಾಪುರ : ನಮ್ಮ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮುಕ್ತವಿಚಾರವಾಗಿ ಹೆಚ್ಚಿನ ರೀತಿಯಲ್ಲಿ ಕರ್ತವ್ಯ ಮಾಡುವ ನಿಟ್ಟಿನಲ್ಲಿ ಮೇ 1ರಿಂದ ಲಂಚ ಮುಕ್ತ ಅಭಿಯಾನ ಮಾಡಲು ಮುಂದಾಗಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು.
ನಗರದ ಕೆ ಆರ್ ಎಸ್ ಕೇಂದ್ರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅದನ್ನು ನಿಲ್ಲಿಸುವ ನಿಟ್ಟಿನಲ್ಲಿ ನಮ್ಮ ತಂಡ ಶ್ರಮಿಸಲಿದೆ, ಕಂದಾಯ ಇಲಾಖೆ ನಗರ ಸಭೆ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಕಚೇರಿಗಳಿಗೆ ಭೇಟಿ ಕೊಟ್ಟು ಸಾರ್ವಜನಿಕರ ತೊಂದರೆಗಳಿಗೆ ನೇರವಾಗಿ ಸ್ಪಂದಿಸಲಾಗುವುದು ಎಂದರು. ಜಿಲ್ಲೆ ಅಥವಾ ತಾಲ್ಲೂಕಿನ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಹಣಕ್ಕಾಗಿ ಬೇಡಿಕೆ ಇಟ್ಟರೆ ಕೂಡಲೇ ನಮ್ಮ ಕೆ ಆರ್ ಎಸ್ ಪಕ್ಷವನ್ನು ಸಂಪರ್ಕಿಸಿ ನಿಮ್ಮೊಂದಿಗೆ ನಾವಿದ್ದೇವೆ ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ನಾವು ಹೋರಾಟ ಮಾಡುವ ಮೂಲಕ ತಕ್ಕ ಪಾಠ ಕಲಿಸಲಿದ್ದೇವೆ ಎಂದರು.
ಅಲ್ಲದೇ ತಾಲ್ಲೂಕಿನ ಗ್ರಾಮಾಂತರ ಭಾಗದ ಹಲವು ಗ್ರಾಮಗಳ ಸರ್ಕಾರಿ ಗೋಮಾಳ ಜಾಗಗಳ ಒತ್ತುವರಿ ಹೆಚ್ಚಾಗಿದ್ದು, ಭೂಗಳ್ಳರಿಂದ ಭೂ ಕಬಳಿಕೆ ಹೆಚ್ಚಾಗಿದೆ, ಸರ್ಕಾರಿ ಜಾಗಗಳನ್ನು ಉಳಿಸುವನಿಟ್ಟಿನಲ್ಲಿ ಕೆ ಆರ್ ಎಸ್ ಪಕ್ಷವು ನೂತನ ಹೋರಾಟವನ್ನು ಪ್ರಾರಂಭಿಸಲಿದೆ, ಯಾವುದೇ ದಾಖಲಾತಿಗಳನ್ನು ಗಣನೆಗೆ ಪಡೆಯದೇ ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರ್ಕಾರಿ ಜಾಗಗಳನ್ನು ನೋಂದಣಿ ಮಾಡಲಾಗುತ್ತಿದೆ ಅಂತಹ ಅಧಿಕಾರಿ ಹಾಗೂ ಪ್ರಭಾವಿಗಳ ವಿರುದ್ಧ ನಮ್ಮ ಹೋರಾಟ ನೆಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮುರಾರಿ ದೊಡ್ಡಬಳ್ಳಾಪುರ , ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ,ತಾಲ್ಲೂಕು ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಲೀಮ್ ಸೇರಿದಂತೆ ಹಲವು ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.