ಕಾರ್ಮಿಕರ ಜೈಲ್ ಭರೋ ಚಳುವಳಿಗೆ ಅಂಗನವಾಡಿ ನೌಕರರ ಬೆಂಬಲ

ದೊಡ್ಡಬಳ್ಳಾಪುರ: ಅಖಿಲ ಭಾರತ ಮಟ್ಟದಲ್ಲಿ ಮೇ 20 ರಂದು ನಡೆಯಲಿರುವ ಕಾರ್ಮಿಕರ ಮುಷ್ಕರ ಹಾಗೂ ಜೈಲ್ ಬರೋ ಚಳವಳಿ ಬೆಂಬಲಿಸಿ ಜಿಲ್ಲೆಯಲ್ಲಿ ಅಂಗನವಾಡಿ ನೌಕರರು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಎಲ್.ಆರ್.ನಳಿನಾಕ್ಷಿ ಹೇಳಿದರು.

ಸೋಮವಾರ ನಗರದ ಕಾರ್ಮಿಕ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸುತ್ತಲೇ ಬರಲಾಗುತ್ತಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೌಕರರನ್ನು ಖಾಯಂ ಮಾಡಬೇಕು. ಅಲ್ಲಿಯ ತನಕ ಕನಿಷ್ಠವೇತನ ನೀಡಬೇಕು. ಫಲಾನುಭವಿಗಳ ಘಟಕವೆಚ್ಚ ಹೆಚ್ಚಳ ಮಾಡಬೇಕೆಂಬ ಬೇಡಿಕೆಗಳನ್ನು ನಿರಂತರವಾಗಿ ಕೇಳಲಾಗುತ್ತಿದೆ. ದೇಶದ ಕಾರ್ಪೊರೇಟ್ ಬಂಡವಾಳಗಾರರಿಗೆ ₹15.32 ಲಕ್ಷ ಕೋಟಿ ಸಾಲ ಮನ್ನಾ, ₹1.97 ಲಕ್ಷ ಕೋಟಿ ಸಬ್ಸಿಡಿಯನ್ನು ಉದಾರವಾಗಿ ಕೊಡುವ ಕೇಂದ್ರ ಸರ್ಕಾರ, ದೇಶದ ಭವಿಷ್ಯವನ್ನು ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳವಣಿಗೆಗಾಗಿ ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಆರ್ಥಿಕ ಕೊರತೆಯ ನೆಪ ಹೇಳಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ 2023 ಏಪ್ರಿಲ್ 1 ರಿಂದ 1972 ಗ್ರಾಜ್ಯುಟಿ ಪಾವತಿ ಕಾಯ್ದೆಯನ್ನು ಅನ್ವಯ ಮಾಡಿ ಈಗಾಗಲೇ 287 ಕಾರ್ಯಕರ್ತರಿಗೆ ಮತ್ತು 1,204 ಸಹಾಯಕಿಯರಿಗೆ ಪಾವತಿಸುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಈ ಕಾಯ್ದೆಯನ್ನು 2011 ರಿಂದ ನಿವೃತ್ತಿಯಾದ 10,311 ಕಾರ್ಯಕರ್ತೆಯರು,11980 ಸಹಾಯಕಿಯರಿಗೂ ಅನ್ವಯಿಸಬೇಕು. ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ರದ್ದುಗೊಳಿಸಬೇಕು. ಐಸಿಡಿಎಸ್ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು. ₹26 ಸಾವಿರ ಕನಿಷ್ಠ ವೇತನ, ₹10 ಸಾವಿರ ಮಾಸಿಕ ಪಿಂಚಣಿ ಕೊಡಬೇಕು. ಟಿಎಚ್ಆರ್ ಮೂಲಕ ಫಲಾನುಭವಿಗಳ ಪೋಷಣ್ ಟ್ರ್ಯಾಕ್ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು. 2011 ರಿಂದ ನಿವೃತ್ತಿಯಾದ ಎಲ್ಲಾ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು. ಈಗಾಗಲೇ ಗ್ರಾಚ್ಯುಟಿ ಬಿಡುಗಡೆ ಆದವರಿಗೆ ಲೆಕ್ಕಾಚಾರ ಪ್ರಕಾರ ನೀಡದೇ ಸಾವಿರಾರು ರೂಪಾಯಿ ಕಡಿತ ಆಗಿರುವುದು ವಾಪಸ್ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಾವತಿ, ಸಹಕಾರ್ಯದರ್ಶಿ ಪ್ರತಿಭಾ, ಖಜಾಂಚಿ ಪಾರ್ವತಮ್ಮ, ಸಂಘದ ಪದಾಧಿಕಾರಿಗಳಾದ ಕೆ.ಹೇಮಾವತಿ, ಆರ್.ಕೆಂಪಮ್ಮ, ಬಿ.ಎನ್.ನಿರ್ಮಲ, ಎಲ್.ಸಿ.ಸುಮಾ, ಬಿ.ಅರುಣ, ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್ ಉಪಸ್ಥಿತರಿದ್ದರು.