ಕೊರಟಗೆರೆ – 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ-ಮಕ್ಕಳಿಗೆ ಸಡಗರ ಸಂಭ್ರಮದಿಂದ ಸ್ವಾಗತ ಕೋರಿದ ಶಿಕ್ಷಕರು

ಕೊರಟಗೆರೆ ,ಮೇ.30: ತಾಲ್ಲೂಕಿನ ಗಟ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗೆ ತಳಿರು-ತೋರಣ ಕಟ್ಟಿ, ಸಿಹಿ ವಿತರಣೆ ಮಾಡಿ ವಿದ್ಯಾರ್ಥಿಗಳನ್ನು ಸಡಗರ ಸಂಭ್ರಮದಿ0ದ ಸ್ವಾಗತಿಸಲಾಯಿತು.

ಮುಖ್ಯ ಶಿಕ್ಷಕಿ ವೀಣಾ, ಸಹ ಶಿಕ್ಷಕರಾದ ಇಂದಿರಾ ಬಿಪಿ , ಹಾಗೂ ಶಾಲಾ ಸಿಬ್ಬಂದಿ , ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಬೇಸಿಗೆ ರಜೆ ಮುಗಿಸಿ ಮುಂದಿನ ತರಗತಿಗಳಿಗೆ ದಾಖಲಾಗಲು ಹರ್ಷಚಿತ್ತರಾಗಿ. ನಗುಮೊಗದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ, ಹೂ ನೀಡಿ ಶಾಲೆಗೆ ಸ್ವಾಗತಿಸಿದರು.‌

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009, 6-14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರವೇಶ, ಹಾಜರಾತಿ ಮತ್ತು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವ ಹಕ್ಕನ್ನು ನೀಡುವ ಸಮರ್ಥನೀಯ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಇದು ಸಮಾನತೆ ಮತ್ತು ತಾರತಮ್ಯವಿಲ್ಲದ ತತ್ವಗಳ ಆಧಾರದ ಮೇಲೆ ಸಮಾನ ಗುಣಮಟ್ಟದ ಶಿಕ್ಷಣದ ಮಕ್ಕಳ ಹಕ್ಕನ್ನು ಒದಗಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ಭಯ, ಒತ್ತಡ ಮತ್ತು ಆತಂಕದಿಂದ ಮುಕ್ತವಾದ ಶಿಕ್ಷಣದ ಮಕ್ಕಳ ಹಕ್ಕನ್ನು ಒದಗಿಸುತ್ತದೆ.

ಈ ವೇಳೆ ಮುಖ್ಯ ಶಿಕ್ಷಕಿ ವೀಣಾ ಅವರು ಮಾತನಾಡಿ,
ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಪೋಷಕರು ಕಾನ್ವೆಂಟ್ ವ್ಯಾಮೋಹ ದೂರ ಮಾಡಿ, ತಮ್ಮ ಮಕ್ಕಳನ್ನು ತಮ್ಮ ಗ್ರಾಮದ ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ನುರಿತ ಶಿಕ್ಷಕರ ತಂಡವಿದ್ದು, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆ. ಉಚಿತ ಪಠ್ಯ ಪುಸ್ತಕ, ಉಚಿತ ಮಧ್ಯಾಹ್ನ ಬಿಸಿಯೂಟ, ಶೂ ಸಾಕ್ಸ್ ಸೇರಿ ಹತ್ತು ಹಲವು ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಸಹಕಾರ ನೀಡಬೇಕು.

ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಸಮಾಜದಲ್ಲಿ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬಿಗೆ ಸಹಕಾರಿಯಾಗುತ್ತೆ. ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣ ದೊರಕಲು ಸಾಧ್ಯ.

ಸರ್ಕಾರಿ ಶಾಲೆಗಳು ಮುಚ್ಚಿದರೆ ಶಿಕ್ಷಣ ಎಂಬುದು ಕೈ ಎಟುಕದ ಮುಗಿಲಾಗುತ್ತದೆ ಹಾಗಾಗಿ ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳು ತಮ್ಮ ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಲು ಕೈಜೋಡಿಸಬೇಕು ಎಂದು ವೀಣಾ ಮನವಿ ಮಾಡಿದರು.

– ಭರತ್ ಕೆ.