ಮಂಡಿಬೆಲೆ ಗ್ರಾಮದಲ್ಲಿ ಗ್ರಾಮದೇವರುಗಳ ದೀಪಾರತಿ, ಜಾತ್ರಾ ಮಹೋತ್ಸವ.
ವಿಜಯಪುರ: ಹೋಬಳಿಯ ಮಂಡಿಬೆಲೆ ಗ್ರಾಮದಲ್ಲಿ ಗ್ರಾಮದೇವರುಗಳ ದೀಪಾರತಿ ಮತ್ತು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಗಳಿಗೆ ಹೂವಿನ ಅಲಂಕಾರ, ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಗ್ರಾಮದಲ್ಲಿನ ಮಹಿಳೆಯರು, ಹೆಣ್ಣುಮಕ್ಕಳು, ಬಗೆ ಬಗೆಯ ಹೂವುಗಳಿಂದ ಮಾಡಿಸಿದ್ದ ಹೂವಿನ ಬುಟ್ಟಿಗಳಲ್ಲಿ ತಂಬಿಟ್ಟಿನ ದೀಪಗಳು, ಬೆಲ್ಲದ ದೀಪಗಳನ್ನು ಹೊತ್ತುಕೊಂಡು, ತಮಟೆ ವಾದನಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ, ದೇವಾಲಯಗಳಲ್ಲಿ ಬೆಳಗಿದರು.
ಗ್ರಾಮದ ಹಿರಿಯ ಮುಖಂಡರುಗಳು, ದೀಪೋತ್ಸವಗಳ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಯುವಕರು, ತಮಟೆ ವಾದನಗಳ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯ, ರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಿಗೆ ತಂಬಿಟ್ಟಿನ ದೀಪಗಳನ್ನು ಹೊತ್ತುಕೊಂಡು ತೆರಳಿದ ಮಹಿಳೆಯರಿಗೆ ದೀಪಗಳು ಬೆಳಗಿದರು.
ಜಾತ್ರಾ ಮಹೋತ್ಸವದ ಅಂಗವಾಗಿ, ಗ್ರಾಮದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ನೆಂಟರುಗಳು, ಸ್ನೇಹಿತರಿಂದ ಮನೆಗಳು ತುಂಬಿದ್ದವು. ಗ್ರಾಮದ ಮುಖ್ಯಧ್ವಾರದಲ್ಲಿ ಸ್ವಾಗತ ಕಮಾನುಗಳು, ಸ್ವಾಗತಿಸಿದವು. ಗಡ್ಡನಾಯಕನಹಳ್ಳಿ ಹಾಗೂ ತಿಮ್ಮನಹಳ್ಳಿ ಗ್ರಾಮಗಳಿಂದಲೂ ಮಹಿಳೆಯರು ತಂಬಿಟ್ಟಿನ ದೀಪಗಳನ್ನು ಮೆರವಣಿಗೆಯ ಮೂಲಕ ತಂದು ಬೆಳಗಿದರು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೇಶವ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ದೀಪಾರತಿಗಳು, ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಗುತ್ತಿದೆ. ನಮ್ಮ ಹಿರಿಯರಿಂದ ಬಂದಿರುವ ಸಂಪ್ರದಾಯಗಳನ್ನು ನಾವು, ಮುಂದುವರೆಸಿಕೊಂಡು ಹೋಗಬೇಕು. ಆಧುನಿಕತೆಯ ನಡುವೆ, ಸಂಪ್ರದಾಯಗಳನ್ನು ಮರೆಯಬಾರದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದುಶ್ಚಟಗಳಿಗೆ ಬಲಿಯಾಗದೆ, ಆರೋಗ್ಯವಂತರಾಗಿರಲು ಸಹಕಾರಿಯಾಗುತ್ತದೆ ಎಂದರು.
ಮುಖಂಡರಾದ ಆರ್.ಮುರಳಿ, ಮಂಡಿಬೆಲೆ ರಾಜಣ್ಣ, ಗಡ್ಡದನಾಯಕನಹಳ್ಳಿ ಆರ್.ಗಂಗಾಧರ್, ಕೆಂಪಣ್ಣ, ಸೇರಿದಂತೆ ಮುಖಂಡರು ಹಾಜರಿದ್ದರು.