ದೊಡ್ಡಬಳ್ಳಾಪುರದಲ್ಲಿ ಶಕ್ತಿ ಯೋಜನೆಯ ಸಂಭ್ರಮ
ದೊಡ್ಡಬಳ್ಳಾಪುರ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದಲ್ಲಿ ಬಸ್ ಗಳಿಗೆ ಅಲಂಕರಿಸಿ, ಪೂಜೆ ಮಾಡಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಅಪಕಾರನಹಳ್ಳಿ ವೆಂಕಟರಮಣಯ್ಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಗೆ ರಾಜ್ಯಾಧ್ಯಂತ ಉತ್ತಮ ಸ್ಪಂದನೆ ದೊರಕಿದ್ದು. ಇದುವರೆಗೂ ಐದು ನೂರು ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿರುವುದು ಸಂತಸದ ಸಂಗತಿಯಾಗಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಲಿಂಗತ್ವ ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದೆ. ರಾಜ್ಯದಲ್ಲಿ ದಿನನಿತ್ಯ ಸುಮಾರು ಐವತ್ತರಿಂದ ಅರವತ್ತು ಲಕ್ಷ ಮಹಿಳಾ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹಿಂದಿನ ಯಾವುದೇ ಸರ್ಕಾರ ಗಳು ಮಾಡದಂತ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ದಿಂದಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವೆಂದು ಜನಪ್ರಿಯವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಮಾತನಾಡಿ ಶಕ್ತಿ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿಗಳು ರಾಜ್ಯದಲ್ಲಷ್ಟೇ ಅಲ್ಲ ಅಂತರರಾಜ್ಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಶಂಸೆ ಪಡೆದಿವೆ. ನೆರೆ ರಾಜ್ಯಗಳು ಕೂಡಾ ಈ ಯೋಜನೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದು ಯೋಜನೆಗಳ ಮಹತ್ವವನ್ನು ಬಿಂಬಿಸುತ್ತದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ನಿರುದ್ಯೋಗ ಬೆಲೆ ಏರಿಕೆ ಬಿಸಿಯಿಂದ ತಲ್ಲಣ ಗೊಂಡಿರುವ ಮಧ್ಯಮ ವರ್ಗದ ಜನರಿಗೆ ಆರ್ಥಿಕ, ಸಾರ್ವತ್ರಿಕ ಮೂಲ ಆದಾಯವನ್ನು ಹೆಚ್ಚಿಸಿ ನೆಮ್ಮದಿಯಿಂದ ಬದುಕು ಸಾಗಿಸಲು ಅನುಕೂಲವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸ್ ಚಾಲಕ, ನಿರ್ವಾಹಕ ಹಾಗೂ ಬಸ್ ಡಿಪೋ ನಿರ್ವಾಹಕರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಡಿ. ಪಿ. ಎ. ಅಧ್ಯಕ್ಷ ಚುಂಚೆಗೌಡ, ಸದಸ್ಯ ಅಂಜನ್ ಮೂರ್ತಿ, ಕೆಪಿಸಿಸಿ ಸದಸ್ಯ ಬಿ. ಜಿ. ಹೇಮಂತರಾಜು, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಪಿ. ಜಗನ್ನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತಾರಾಮ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶ್ರೀನಗರ ಬಶೀರ್, ನಗರ ಸಭಾ ನಾಮಿನಿ ಸದಸ್ಯರಾದ ಕಾಂತರಾಜ್, ಅಖಿಲೇಶ್, ಮುಖಂಡರಾದ ಆದಿತ್ಯ ನಾಗೇಶ್, ನೂರುಲ್ಲ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.