ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ದೋರಣೆ ಖಂಡಿಸಿ ಸದಸ್ಯರ ದಿಡೀರ್ ಪ್ರತಿಭಟನೆ
ದೊಡ್ಡಬಳ್ಳಾಪುರ: ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಅಡ್ಡಿ ಪಡಿಸುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ನ ನಗರಸಭಾ ಸದಸ್ಯರು ನಗರಸಭೆ ಕಚೇರಿ ಮುಂಭಾಗ ದಿಡೀರ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ ದಲಿತ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳ ಅಭಿವೃದ್ಧಿ ವಿಚಾರದಲ್ಲಿ ಇಲ್ಲ ಸಲ್ಲದ ಕಾರಣ ಹೇಳಿ ಸ್ಟಾಯಿಸಮಿತಿ ಅಧ್ಯಕ್ಷರು ಅಡ್ಡಿ ಪಡಿಸುತ್ತಿದ್ದಾರೆ. ವಾರ್ಡಿನ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸದಸ್ಯರ ಆದ್ಯ ಕರ್ತವ್ಯವಾಗಿದೆ. ಆದರೆ ವಾರ್ಡಗಳ ಅಭಿವೃದ್ಧಿ ಕೆಲಸಗಳಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ವಿನಾ ಕಾರಣ ಮೂಗು ತೂರಿಸಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿದ್ದಾರೆ.
ಕಚೇರಿ ಪಾಳ್ಯ ವಾರ್ಡ್ ನ ಒಳಚರಂಡಿ ಸಂಪರ್ಕ ಮಾರ್ಗ ಕಲ್ಪಿಸಲು ಮುಂದಾಗಿದ್ದು ಇದಕ್ಕೆ ನನ್ನ ಅಪ್ಪಣೆ ಬೇಕು ಎಂದು ಹೇಳುತ್ತಾರೆ. ವಾರ್ಡಗಳ ಎಲ್ಲಾ ಕೆಲಸಗಳಿಗೂ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ಅಪ್ಪಣೆ ಪಡೆಯಬೇಕಾ.. ಹಾಗಾದರೆ ಸದಸ್ಯರು ಸ್ವತಂತ್ರವಾಗಿ ಕೆಲಸ ಮಾಡಲು ಹಕ್ಕಿಲ್ಲವೇ.. ಇಂತಹ ಸರ್ವಾಧಿಕಾರಿ ದೋರಣೆಯನ್ನು ಒಪ್ಪಲು ಸಾಧ್ಯವಿಲ್ಲ. ಇದಲ್ಲದೆ ವಾರ್ಡಗಳ ಅನುದಾನ ಹಂಚಿಕೆ ವಿಚಾರದಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಈ ಕೂಡಲೇ ಪೌರಾಯುಕ್ತರು ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮಂಜುನಾಥ್ ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಆನಂದ್, ಚಂದ್ರಮೋಹನ್, ಸುರೇಶ, ನಾಮಿನಿ ಸದಸ್ಯ ಶಿವಕುಮಾರ್, ಮುಖಂಡರಾದ ಫಯಾಜ್, ಶೇಖರ್ ಮುಂತಾದವರು ಭಾಗವಹಿಸಿದ್ದರು.