ಸದನದ ಕಲಾಪವನ್ನು ವೀಕ್ಷಿಸಿದ ಸೆಂಟ್ ಥಾಮಸ್ ವಿದ್ಯಾರ್ಥಿಗಳು
ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರಿನ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ವಿಧಾನಸೌಧಕ್ಕೆ ತೆರಳಿ, ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹೇಗೆ ಶಾಸನಗಳನ್ನು ರೂಪಿಸುತ್ತಾರೆ ಎನ್ನುವ ಕುರಿತು, ಮನವರಿಕೆ ಮಾಡಿಕೊಂಡಿದ್ದಾರೆ.
ಸದನದಲ್ಲಿ ಮುಖ್ಯಮಂತ್ರಿ ಹಾಗೂ ಆಡಳಿತ ಪಕ್ಷದ ಸಚಿವರುಗಳು ಎಲ್ಲಿ ಕೂರುತ್ತಾರೆ. ವಿರೋಧ ಪಕ್ಷದ ನಾಯಕರು ಎಲ್ಲಿ ಕೂರುತ್ತಾರೆ. ಸದನವನ್ನು ಮುನ್ನಡೆಸುವ ಸಭಾಧ್ಯಕ್ಷರು ಹೇಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ, ಶಾಸಕರು ಹೇಗೆಲ್ಲಾ ಪ್ರಶ್ನೆ ಮಾಡುತ್ತಾರೆ. ಸಂಬAಧಪಟ್ಟ ಸಚಿವರು ಹೇಗೆ ಉತ್ತರಿಸುತ್ತಾರೆ, ಎನ್ನುವ ಬಗ್ಗೆ ಕಲಾಪದಲ್ಲಿ ವೀಕ್ಷಣೆ ಮಾಡಿದ ವಿದ್ಯಾರ್ಥಿಗಳು, ತಮ್ಮ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.
ಸದನದಲ್ಲಿ ಹಾಜರಿದ್ದ ಶಿಡ್ಲಘಟ್ಟದ ಶಾಸಕ ಬಿ.ಎನ್. ರವಿಕುಮಾರ್ ಅವರನ್ನು ಭೇಟಿ ಮಾಡಿ, ವಿಧಾನಸೌಧದ ಭವ್ಯ ಕಟ್ಟಡದ ಮುಂದೆ ನೆನಪಿನ ಫೋಟೋ ಕ್ಲಿಕ್ಕಿಸಿಕೊಂಡರು.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪಾಠವನ್ನು ನೇರವಾಗಿ ಅನುಭವಿಸುವಂತಾಗಿದ್ದು, ಶಾಸಕರು ನೀಡಿದ ಈ ಅವಕಾಶವು ಅವರಿಗೆ ಭವಿಷ್ಯದಲ್ಲಿ ಸಮಾಜದ ಕಡೆ ಜವಾಬ್ದಾರಿ ಹೊತ್ತ ನಾಯಕರಾಗುವ ಸ್ಫೂರ್ತಿ ತುಂಬಿದೆ ಎಂದು ಶಾಲೆಯ ಮುಖ್ಯಸ್ಥ ಜೋಸ್ ಥಾಮಸ್ ಹೇಳಿದರು.
ವಿದ್ಯಾರ್ಥಿಗಳು ಶಾಸಕರು ನೀಡಿದ ಪ್ರೋತ್ಸಾಹ ನಮಗೆ ಪ್ರಜಾಪ್ರಭುತ್ವದ ಅರಿವು ಹೆಚ್ಚಿಸಿತು. ಇದು ನಮ್ಮ ಜೀವನದಲ್ಲಿ ಮರೆಯಲಾಗದ ದಿನ ಎಂದು ಸಂತಸ ವ್ಯಕ್ತಪಡಿಸಿದರು.
ಶಾಸಕ ಬಿ.ಎನ್. ರವಿಕುಮಾರ್ ಅವರು “ವಿದ್ಯಾರ್ಥಿಗಳು ದೇಶದ ಭವಿಷ್ಯ. ಇವರಿಗೆ ಇಂತಹ ಅನುಭವ ಸಿಕ್ಕರೆ ಸಮಾಜ ಸೇವೆಯ ಜವಾಬ್ದಾರಿ ಅರಿತು ಬೆಳೆಯುತ್ತಾರೆ ಎಂದು ತಿಳಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲಾ ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಕಲ್ಪಿಸಲು ಭರವಸೆ ನೀಡಿದರು.
೨೩.ಎಸ್.ಡಿ.ಎಲ್.ಪಿ.೦೧: ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸೆಂಟ್ ಥಾಮಸ್ ಶಾಲೆಯ ವಿದ್ಯಾರ್ಥಿಗಳು ವಿಧಾನಸೌಧದಲ್ಲಿ ಕಲಾಪ ವೀಕ್ಷಣೆ ಮಾಡಿದ ನಂತರ ಶಾಸಕ ಬಿ.ಎನ್.ರವಿಕುಮಾರ್ ಅವರೊಂದಿಗೆ ಪೋಟೊ ತೆಗೆಸಿಕೊಂಡಿದ್ದಾರೆ.