ಬಹುತ್ವ ಕರ್ನಾಟಕವನ್ನು ಸಮಾನತೆ ಮತ್ತು ಪ್ರಜಾ ಸತ್ತಾತ್ಮಕ ಪ್ರಜ್ಞೆಯ ಮೂಲಕ ಕಟ್ಟಬೇಕಿದೆ–ಡಾ,ರಹಮತ್ ತರೀಕೆರೆ

ದೊಡ್ಡಬಳ್ಳಾಪುರ:ಬಹುತ್ವ ಕರ್ನಾಟಕವನ್ನು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಪ್ರಜ್ಞೆಯ ಮೂಲಕ ಕಟ್ಟಬೇಕಾಗಿದೆ. ಏಕರೂಪೀಕರಣದ ಆತಂಕದ ಪ್ರಸ್ತುತ ಈ ಕಾಲಘಟ್ಟದಲ್ಲಿ ಬಹುತ್ವದ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ಆರ್.ಡಿ.ಕನ್ವೆನ್ಷನ್ ಹಾಲ್ ನಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬೆಂಗಳೂರಿನ ಆಕೃತಿ ಪುಸ್ತಕ ಇವರ ಸಹಯೋಗದಲ್ಲಿ ಬಹುತ್ವ ಕರ್ನಾಟಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸಂಸ್ಕೃತಿ, ಪರಂಪರೆ ದೊರೆಯುವ ಬಹುತ್ವದ ಅರಿವನ್ನು ಶೋಧಿಸಬೇಕಾಗಿದೆ. ಬಹುತ್ವಕ್ಕಾಗಿ ನಾಗರಿಕ ಪ್ರಜ್ಞೆಯನ್ನು ಹೆಚ್ಚಿಸಬೇಕು. ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರಯ ಹೇಳುವ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ ಇವುಗಳನ್ನು ಬಹುತ್ವದ ಮೌಲ್ಯವಾಗಿ ರೂಪಿಸಬೇಕು. ಶಾಲಾ ಕಾಲೇಜುಗಳು ಬಹುತ್ವ ಕಲಿಸುವ ತಾಣಗಳಾಗಬೇಕಾಗಿದೆ ಎಂದರು.
ಭಾರತವು ವೈವಿಧ್ಯಮಯತೆಯಿಂದ ಕೂಡಿದೆ. ವೈವಿಧ್ಯತೆಯೇ ಬಹುತ್ವವಲ್ಲ, ಸಮಾನ ಅವಕಾಶಗಳೇ ಬಹುತ್ವ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವ ಸಾಂಸ್ಕೃತಿಕ ರಾಜಕಾರಣ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಒಂದೇ ಸಂಸ್ಕೃತಿ, ನಾಯಕತ್ವ, ಧರ್ಮವನ್ನು ಹೇರುವುದು ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ಪ್ರಜಾಭುತ್ವ ನಾಶವಾಗುತ್ತದೆ. ಭಾರತದ ಆರ್ಥಿಕ ಹಿಡಿತ ಶೇ.10 ಜನರಲ್ಲಿದೆ ಎಂಬುದು ಅಸಮಾನತೆಯನ್ನು ತೋರಿಸುತ್ತದೆ. ಹಲವು ಭಾಷೆ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ ಹೊಂದಿರುವ ಭಾರತಕ್ಕೆ ಬಹುತ್ವ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದರು.
ಸಾಹಿತಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಮಾತನಾಡಿ, ಬಹುತ್ವದಲ್ಲಿ ವೈಜ್ಞಾನಿಕ ಸತ್ಯವು ಅಡಗಿದೆ. ಮನುಷ್ಯಪರವಾದ ಬಹುತ್ವ ಉಳಿದರೆ ಮನುಷ್ಯ ಉಳಿಯುತ್ತಾನೆ. ಕೋಮುವಾದ ಮತ್ತು ಮತೀಯವಾದದ ಸಂಘರ್ಷಕ್ಕೆ ಅನುಮಾನ ಕಾರಣವಾಗುತ್ತದೆ. ಅನುಮಾನ ದ್ವೇಷವಾಗಿ, ಹಿಂಸೆ ರೂಪತಾಳಿ ವಿನಾಶದ ಕಡೆಗೆ ದೂಡುತ್ತದೆ. ಕೋಮು ಸೌಹಾರ್ದತೆಗೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬಹುತ್ವದ ಅಗತ್ಯವಿದೆ ಎಂದರು.
ವಿಮರ್ಶಕ ಡಾ.ಕಂಟನುಕುಂಟೆ ರಂಗನಾಥ ಮಾತನಾಡಿ, ಪ್ರಭುತ್ವ ಮತ್ತು ಜನತೆ ಎರಡು ಕಡೆಯಿಂದಲೂ ಬಹುತ್ವ ಸಾಧಿಸಬೇಕಾಗಿದೆ. ಪ್ರಜಾಪ್ರಭುತ್ವ ಆಶಯದೊಂದಿಗೆ ಬಹುತ್ವ ಒಂದಾಗಬೇಕು. ಬಹುತ್ವವನ್ನು ಜೀವನ ಕ್ರಮದ ಪ್ರಕ್ರಿಯೆ ಆಗಬೇಕು. ಬಹುತ್ವಕ್ಕಿರುವ ಅಪಾಯಗಳನ್ನು ಅರಿಯಬೇಕೆಂದರು.
ವಿಮರ್ಶಕ ಡಾ.ರವಿಕುಮಾರ್ ನೀಹ ಮಾತನಾಡಿ, ಯಾವುದೇ ಧರ್ಮದಲ್ಲಿ ಏಕರೂಪತೆ ತರಲು ಸಾಧ್ಯವಿಲ್ಲ. ಒಂದೇ ರೀತಿಯ ಊಟ, ಸಿದ್ಧಾಂತವನ್ನು ಹೇರುವುದು ಅಪಾಯಕಾರಿ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವುದು ಸರಿಯಲ್ಲ ಎಂದರು.
ಬಹುತ್ವ ಕರ್ನಾಟಕ ಪುಸ್ತಕದ ಲೇಖಕರಾದ ಡಾ.ರಹಮತ್ ತರೀಕೆರೆ ಅವರೊಂದಿಗೆ ನಡೆದ ಸಂವಾದದಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗದ ಡಾ.ಪ್ರಕಾಶ್ ಮಂಟೆದ, ಹೇಮಂತ್ ಲಿಂಗಪ್ಪ, ಉಪನ್ಯಾಸಕರುಗಳಾದ ವನಿತಾ, ಪ್ರಸನ್ನ ಲಕ್ಷ್ಮೀಪುರ, ಎಚ್.ಎನ್.ರೇಣುಕಾರಾಧ್ಯ, ದೊಡ್ಡಬಳ್ಳಾಪುರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.