ತೂಬಗೆರೆ ಗಣೇಶ ವಿಸರ್ಜನೆ.. ಆನೆ ಅಂಬಾರಿ ಮೆರವಣಿಗೆಗೆ ಸಿದ್ಧತೆ
ದೊಡ್ಡಬಳ್ಳಾಪುರ:ತಾಲೂಕಿನ,ತೂಬಗೆರೆಯಲ್ಲಿ ಈ ಬಾರಿ ಗಣೇಶೋತ್ಸವವು ವಿಶಿಷ್ಟವಾಗಿ ನಡೆಯುತ್ತಿದೆ. ತೂಬಗೆರೆ ಚಾವಡಿ ಗಣೇಶೋತ್ಸವ ಸಮಿತಿಯವರು ಮೊದಲ ಬಾರಿಗೆ ತೂಬಗೆರೆಯ ಇತಿಹಾಸದಲ್ಲೇ ದಸರಾ ಮಾದರಿ ಆನೆ ಅಂಬಾರಿ ಮೆರವಣಿಗೆಯನ್ನು ಆಯೋಜಿಸಿದ್ದು, ಇದು ಊರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಮಧು ತಿಳಿಸಿದ್ದಾರೆ.
ಅಂತಿಮ ದಿನವಾದ ಸೆಪ್ಟೆಂಬರ್ 1, ಸೋಮವಾರ ರಂದು ಮಧ್ಯಾಹ್ನದಿಂದ ಸಂಜೆವರೆಗೆ ಆನೆ ಅಂಬಾರಿ ಮೆರವಣಿಗೆ ಹಾಗೂ ಭವ್ಯ ವಿಸರ್ಜನೆ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ, ನಾದಸ್ವರ, ಕಲಾ ತಂಡಗಳು ಭಕ್ತರ ಮನರಂಜನೆಗೆ ಸಿದ್ಧವಾಗಿವೆ.
ಈ ಕುರಿತು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ ಮಾತನಾಡಿ,
ಮೆರವಣಿಗೆಯ ಹಾಗೂ ವಿಸರ್ಜನೆಗಾಗಿ ಅಗತ್ಯವಾದ ಸರ್ಕಾರದ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳಲಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿಯಪ್ಪ ಹಾದಿಯಾಗಿ ಎಲ್ಲಾ ಮುಖಂಡರು ಆಗಮಿಸಲಿದ್ದಾರೆ.ಸಾರ್ವಜನಿಕರು ಶಿಸ್ತಿನಿಂದ ಹಾಗೂ ಭಕ್ತಿಭಾವದಿಂದ ಪಾಲ್ಗೊಳ್ಳುವಂತೆ ಸಮಿತಿ ಮನವಿ ಮಾಡಿದೆ. ವಿಶೇಷವಾಗಿ ಯುವಕರಿಂದ ಹೆಚ್ಚಿನ ಸಹಕಾರ ನಿರೀಕ್ಷಿಸಲಾಗಿದೆ ಎಂದರು.
ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಮಾತಾನಾಡಿ, ಚಾವಡಿ ಗಣೇಶೋತ್ಸವ ಸಮಿತಿಯ ಎಲ್ಲಾ ದಾನಿಗಳು ಹಾಗೂ ಊರಿನ ಗ್ರಾಮಸ್ಥರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಸಹಕಾರ, ಧನಸಹಾಯ ಹಾಗೂ ಸೇವಾಭಾವನೆಯಿಂದಲೇ ಈ ಮಹತ್ವದ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ಐತಿಹಾಸಿಕ ಸಂದರ್ಭವನ್ನು ಎಲ್ಲರೂ ಬಂದು ಸಾಕ್ಷಿಯಾಗಬೇಕು. ಮಾಧ್ಯಮ ಸ್ನೇಹಿತರೂ ಜನಸಾಮಾನ್ಯರಿಗೆ ಈ ಸುದ್ದಿ ತಲುಪಿಸುವಲ್ಲಿ ಸಹಕರಿಸಬೇಕು ಎಂದು ಚಾವಡಿ ಗಣೇಶೋತ್ಸವ ಸಮಿತಿಯ ಸಂಚಾಲಕ ಉದಯ ಆರಾಧ್ಯ ಮನವಿ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದೇವೇಂದ್ರಪ್ಪ, ಮುಖಂಡರಾದ ಲಗುಮಯ್ಯ,
ಯುವ ಮುಖಂಡ ಉದಯ ಆರಾಧ್ಯ, ಕೃಷ್ಣಪ್ಪ. ಚಾವಡಿ ಗಣೇಶ ಸಮಿತಿ ಸದಸ್ಯರು ಭಾಗವಹಿಸಿದ್ದರು.