ತೂಬಗೆರೆ ವಿ. ಎಸ್. ಎಸ್. ಎನ್. ಅಧ್ಯಕ್ಷರಾಗಿ ವೀರಭದ್ರಪ್ಪ, ಉಪಾಧ್ಯಕ್ಷರಾಗಿ ವಿಜಯ್ ಕುಮಾರ್ ಆಯ್ಕೆ

ದೊಡ್ಡಬಳ್ಳಾಪುರ:ತಾಲ್ಲೂಕಿನ ತೂಬಗೆರೆ ರೈತ ಸೇವಾ ಸಹಕಾರ ಸಂಘ (ನಿ) ಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯನ್ನು ಶನಿವಾರ ಬೆಳಿಗ್ಗೆ 10.30ಕ್ಕೆ ಸಂಘದ ಕಚೇರಿಯಲ್ಲಿ ನಡೆಸಲಾಯಿತು.

ಆಡಳಿತ ಮಂಡಳಿಯ 13 ನಿರ್ದೇಶಕರ ಪೈಕಿ, ಅಧ್ಯಕ್ಷ ಸ್ಥಾನಕ್ಕೆ ವೀರಭದ್ರಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಿಜಯ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳು ಪರಿಶೀಲಿಸಿದ ನಂತರ, ಪ್ರತಿ ಹುದ್ದೆಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ, ಅವುಗಳನ್ನು ಅಂಗೀಕರಿಸಿ ವೀರಭದ್ರಪ್ಪ ಅವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಮತ್ತು ವಿಜಯ್ ಕುಮಾರ್ ಅವರನ್ನು ಉಪಾಧ್ಯಕ್ಷರಾಗಿ ಘೋಷಿಸಿದರು.

ಚುನಾವಣಾ ಫಲಿತಾಂಶದ ನಂತರ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ, ರೈತ ಮುಖಂಡ ವಾಸು, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಿಕ್ಕ ಪಿಳ್ಳಪ್ಪ, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ, ನಾನು ಮೊದಲ ಬಾರಿಗೆ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನಗೆ ಬೆಂಬಲ ನೀಡಿದ ಎಲ್ಲಾ ನಿರ್ದೇಶಕರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘದ ಮೂಲಕ ರೈತರಿಗೆ ಅನುಕೂಲಕರವಾದ ಉತ್ತಮ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡ ವಾಸುದೇವ್, ತೂಬಗೆರೆ ಗ್ರಾಪಂ ಸದಸ್ಯ ವೆಂಕಟೇಶ್, ಮುನಿಕೃಷ್ಣಪ್ಪ, ಕೃಷ್ಣಮೂರ್ತಿ. ನರಸಿಂಹಮೂರ್ತಿ, ತೂಬಗೆರೆ ಡೇರಿ ಮಾಜಿ ಅಧ್ಯಕ್ಷ ಗಂಗರಾಜ ಕಾಂಗ್ರೆಸ್ ‌ ಮುಖಂಡರಾದ ನರಸಿಂಹಮೂರ್ತಿ, ಕಾಂತರಾಜ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಹಾಗೂ ರೈತರು ಇದ್ದರು.