ಸಂವಿಧಾನ ಜಾಗೃತಿ ರಥಕ್ಕೆ ದೊಡ್ಡ ತುಮಕೂರಿನಲ್ಲಿ ಅದ್ದೂರಿ ಸ್ವಾಗತ.
ದೊಡ್ಡಬಳ್ಳಾಪುರ:ಕಸಬಾ ಹೋಬಳಿ ದೊಡ್ಡತುಮಕೂರು ಗ್ರಾಮ ಪಂಚಾಯಿತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ ಎನ್ ನೇತೃತ್ವದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂವಿಧಾನದ ಪ್ರಸ್ತಾವನೆ ಬೋಧನೆ ಮಾಡಿ ಭಾರತದ ಸಂವಿಧಾನವು ಬೃಹತ್ ಸಂವಿಧಾನವಾಗಿದ್ದು, ಸಂವಿಧಾನವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲಾ ವರ್ಗಗಳಿಗೆ ಸಂಬಂಧಿಸಿದ ಜಾತ್ಯಾತೀತ ಸಂವಿಧಾನವಾಗಿದ್ದು,ದೇಶದ ನಾಗರೀಕರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸಿದ್ದು, ಸಂವಿಧಾನವು ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪ್ರಪಂಚದ ಎಲ್ಲಾ ದೇಶಗಳಿಗೆ ಮಾದರಿಯಾದ ಸಂವಿಧಾನವಾಗಿದೆ ಎಂದು ಸಂವಿಧಾನದ ಮಹತ್ವದ ಕುರಿತು ವಿವರವಾಗಿ ತಿಳಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಎನ್ ಮುನಿರಾಜು ಮಾತನಾಡಿ ಸಂವಿಧಾನದ ಕರುಡು ಸಮಿತಿಯ ಅಧ್ಯಕ್ಷರಾದ ಡಾ ಬಿ ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಭಾರತವು ವಿವಿಧತೆಯಲ್ಲಿ ಏಕತೆಯ ದೇಶವಾಗಿದ್ದು,ನಮ್ಮ ಸಂವಿಧಾನವು ದೇಶದ ನಾಗರೀಕರಿಗೆ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಹಾಗೂ ಕಾನೂನಾತ್ಮಕವಾಗಿ ಸಮಾನತೆಯನ್ನು ಒದಗಿಸಿದ್ದು,ದೇಶದ ಪ್ರಗತಿಯಲ್ಲಿ ಸಂವಿಧಾನದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಪಂ.ರಾ) ಕುಮಾರ್, ಸಹಾಯಕ ನಿರ್ದೇಶಕರು (ಕೃಷಿ) ರಾಜೇಶ್ವರಿ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಸನ್ನಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಗ್ರಾ. ಪಂ.ಜನಪ್ರತಿನಿಧಿಗಳು, ಗ್ರಾ. ಪಂ.ಸಿಬ್ಬಂದಿ,ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.