ಚುನಾವಣೆ ಬಹಿಷ್ಕಾರ ಗ್ರಾಮಸ್ಥರೊಂದಿಗೆ ಉಪವಿಭಾಗಾಧಿಕಾರಿಗಳ ಮಾತುಕಥೆ, 3ನೇ ಹಂತದ ಸಂಸ್ಕರಣಾ ಘಟಕಕ್ಕೆ ಪಟ್ಟು, ನಾಳೆ ಜಿಲ್ಲಾಧಿಕಾರಿಗಳ ಭೇಟಿ
ದೊಡ್ಡಬಳ್ಳಾಪುರ : ಶುದ್ಧ ನೀರಿಗಾಗಿ ಹೋರಾಟ ಮಾಡುತ್ತಿರುವ 18 ಗ್ರಾಮಗಳ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ, ಬಹಿಷ್ಕಾರ ಹಿಂತೆಗೆದು ಕೊಳ್ಳುವಂತೆ ಅಧಿಕಾರಿಗಳ ತಂಡ ಗ್ರಾಮಸ್ಥರೊಂದಿಗೆ ಮಾತುಕಥೆಯನ್ನ ನಡೆಸುತ್ತಿದೆ, 3 ನೇ ಹಂತದ ಸಂಸ್ಕರಣಾ ಘಟಕ ಸ್ಫಾಪನೆಗೆ ಪಟ್ಟು ಹಿಡಿಯಲಾಗಿದ್ದು, ಇಂದು ಉಪವಿಭಾಗಧಿಕಾರಿಗಳಾದ ಶ್ರೀನಿವಾಸ್ ನಡೆಸಿದ ಮಾತುಕಥೆ ಸಹ ವಿಫಲವಾಗಿದೆ, ನಾಳೆ ಜಿಲ್ಲಾಧಿಕಾರಿಗಳಾದ ಶಿವಶಂಕರ್ ರೈತರೊಂದಿಗೆ ಮಾತುಕಥೆಯನ್ನ ನಡೆಸಲಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಮ ಪಂಚಾಯಿತಿಯ 18 ಗ್ರಾಮಗಳ ಜನರು ಶುದ್ಧ ನೀರಿಗಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ದೊಡ್ಡಬಳ್ಳಾಪುರ ತ್ಯಾಜ್ಯ ನೀರು ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗೆ ಸೇರಿ ಅಂತರ್ಜಲ ನೀರು ವಿಷವಾಗಿದೆ, ವಿಷಯುಕ್ತ ನೀರು ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಈ ಕಾರಣದಿಂದ ಶುದ್ಧ ನೀರು ಕೊಡುವಂತೆ ಒತ್ತಾಯಿಸಿ ಲೋಕಸಭಾ ಚುನಾವಣೆಗೆ ಬಹಿಷ್ಕಾರ ಮಾಡಗಿದ್ದು, ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಗಳ ಹಾಕುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಿದ್ದಾರೆ.
ಉಪವಿಭಾಗಧಿಕಾರಿಗಳಾದ ಶ್ರೀನಿವಾಸ್ , ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಪೌರಾಯುಕ್ತರಾದ ಪರಮೇಶ್ವರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಮುನಿರಾಜುರವರು ಇಂದು ಗ್ರಾಮಸ್ಥರನ್ನ ಭೇಟಿ ಮಾಡಿ ಚುನಾವಣೆ ಬಹಿಷ್ಕಾರ ಹಿಂತೆಗೆದು ಕೊಳ್ಳುವಂತೆ ಮನವಿ ಮಾಡಿದರು, 3 ನೇ ಹಂತದ ಸಂಸ್ಕರಣಾ ಘಟಕ ಸ್ಫಾಪನೆಯಾಗುವವರೆಗೂ ಚುನಾವಣೆ ಬಹಿಷ್ಕಾರ ತಿರ್ಮಾನದಿಂದ ಹಿಂದೆ ಸರಿಯುವುದಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದರು, ಉಪವಿಭಾಗಧಿಕಾರಿಗಳ ಮಾತುಕಥೆ ಸಹ ವಿಫಲವಾಗಿದ್ದು ನಾಳೆ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಲಿದ್ದು ರೈತರೊಂದಿಗೆ ಮಾತುಕಥೆ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮುಖಂಡರಾದ ಆದಿತ್ಯ ನಾಗೇಶ್, ವಸಂತ್ . ಸತೀಶ್, ಸಂದೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು