ವೈಜ್ಞಾನಿಕ ಪರಿಹಾರ ಕೊಡದ ಹೊರತು ರೈತರು ಭೂಮಿ ಕೊಡಬೇಡಿ –ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಮಾಜಿ ಸಿಎಂ ಕುಮಾರಸ್ವಾಮಿ‌ ಕರೆ…!

ದೊಡ್ಡಬಳ್ಳಾಪುರ: KIADB ಸೇರಿದಂತೆ ಯಾವುದೇ ಯೋಜನೆಗಳಿಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ನ್ಯಾಯಯುತ, ವೈಜ್ಞಾನಿಕ ಪರಿಹಾರ ಕೊಡದ ಹೊರತು ರೈತರು ಜಮೀನು ಕೊಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.

ನಗರದ ಹಳೇ ಆಸ್ಪತ್ರೆ ವೃತ್ತದಲ್ಲಿ ನಡೆದ ಜೆಡಿಎಸ್- ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಅವರ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು, ಭೂಸ್ವಾಧೀನಕ್ಕೆ ಯಾರು ಸಹಿ ಹಾಕಬಾರದು. ಎರಡು ತಿಂಗಳು ಸಮಾಧಾನವಾಗಿರಿ, ನ್ಯಾಯಯುತ ಬೆಲೆ ಕೊಡಿಸುತ್ತೇವೆ ಎಂದು ಹೇಳಿದರು.

ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣಹೊಸಹಳ್ಳಿ, ನಾಗದೇನಹಳ್ಳಿ ಸುತ್ತಮುತ್ತ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. 2013 ರ ಭೂಸ್ವಾಧೀನ ಕಾಯ್ದೆಯಂತೆ ರೈತರ ಫಲವತ್ತಾದ ಭೂಮಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ಪರಿಹಾರ ನೀಡುವಂತೆ ಒತ್ತಾಯಿಸಿ ನಾಲ್ಕು ತಿಂಗಳಿಂದ ಈ ಭಾಗದ ರೈತರು ಧರಣಿ ನಡೆಸುತ್ತಿದ್ದಾರೆ. ರೈತರ ಬೇಡಿಕೆಗೆ ಸ್ಪಂದಿಸುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರಿಗೆ ಹರೀಶ್ ಗೌಡ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ತಾಲೂಕಿನ ದೊಡ್ಡಬೆಳವಂಗಲ ಸಮೀಪ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಿಂದಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಕಸ ವಿಲೇವಾರಿ ಘಟಕ ಸುತ್ತಲಿನ ಹಳ್ಳಿಗಳ ಜನರ ಬದುಕನ್ನು ಹೈರಾಣಾಗಿಸಿದೆ. ಅದೇ ರೀತಿ ಮಜರಾ ಹೊಸಹಳ್ಳಿ, ದೊಡ್ಡತುಮಕೂರು ಗ್ರಾ.ಪಂ.ವ್ಯಾಪ್ತಿಯ ಸುತ್ತಲಿನ 70ಕೆರೆಗಳು ಕಲುಷಿತಗೊಂಡಿವೆ. ಕೆರೆ ಕಲುಷಿತದಿಂದ ಅಂತರ್ಜಲವೂ ಹಾಳಾಗಿದೆ. ಆದಷ್ಟು ಬೇಗ ಎತ್ತಿನ ಹೊಳೆ ಯೋಜನೆಯಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭೆ ಕ್ಷೇತ್ರಗಳಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಹರೀಶ್ ಗೌಡ ಅವರು ಮನವಿ ಮಾಡಿದರು.ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಕುಮಾರಣ್ಣ ಅವರು ಈ ಬಾರಿ ಗೆದ್ದು ಕೇಂದ್ರ ಸಚಿವರಾಗುವುದು ಸೂರ್ಯಚಂದ್ರರಷ್ಟೇ ಸತ್ಯ ಎಂದು ಹೇಳಿದರು.