ಮೀನುಗಳ ಮರಣ ಹೋಮ, ಮಳೆ ನೀರಿನೊಂದಿಗೆ ಹರಿದು ಬಂದ ಕೈಗಾರಿಕೆಗಳ ವಿಷಕಾರಿ ನೀರು
ದೊಡ್ಡಬಳ್ಳಾಪುರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕತುಮಕೂರು ಕೆರೆಗೆ ನೀರು ಹರಿದು ಬಂದಿದೆ, ಕೈಗಾರಿಕೆಗಳ ತ್ಯಾಜ್ಯ ನೀರು ಅಪಾರ ಪ್ರಮಾಣದಲ್ಲಿ ಹರಿದ ಬಂದ ಹಿನ್ನಲೆ ಕೆರೆಯಲ್ಲಿನ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಚಿಕ್ಕತುಮಕೂರು ಕೆರೆಗೆ ದೊಡ್ಡಬಳ್ಳಾಪುರ ನಗರದ ಒಳಚಂರಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ನೀರು ಶುದ್ಧೀಕರಣವಾಗದೆ ನೇರವಾಗಿ ಕೆರೆಯ ಒಡಲು ಸೇರುತ್ತಿದೆ, ಈ ಕಾರಣದಿಂದ ಕೆರೆಗಳಲ್ಲಿನ ಮೀನುಗಳ ಸಾವಿಗೆ ಕಾರಣವಾಗಿದೆ, ಕೆಲವು ದಿನಗಳ ಹಿಂದೆಯಷ್ಟೇ ನಾಗರಕೆರೆಯಲ್ಲೂ ಮೀನುಗಳು ಸಾವನ್ನಪ್ಪಿದ್ದು, ಈಗ ಚಿಕ್ಕತುಮಕೂರು ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿರುವುದು ಅರ್ಕಾವತಿ ನದಿ ಪಾತ್ರದ ಕೆರೆಗಳು ವಿಷಕಾರಿಯಾಗಿವೆ ಎಂಬುದನ್ನು ಸಾಕ್ಷಿಕರಿಸಿದೆ.
ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗೆ ಹರಿದು ಬರುತ್ತಿರುವ ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ವಿಷಕಾರಿ ನೀರನ್ನು ಶುದ್ಧೀಕರಿಸಿದ ನಂತರವೇ ಕೆರೆಗಳಿಗೆ ಬಿಡಬೇಕೆಂದು ಒತ್ತಾಯಿಸಿ ಕಳೆದ 10 ವರ್ಷಗಳಿಂದ ಹೋರಾಟವನ್ನ ಸ್ಥಳೀಯ ರೈತರು ಮಾಡುತ್ತಿದ್ದಾರೆ, ಕಳೆದ ಮೂರು ವರ್ಷಗಳಿಂದ ಅರ್ಕಾವತಿ ನದಿ ಹೋರಾಟ ಸಮಿತಿ ತೀರ್ವ ಸ್ವರೂಪದ ಹೋರಾಟವನ್ನ ಮಾಡಿಕೊಂಡು ಬರುತ್ತಿದೆ, ಈಗಾಗಲೇ ಅಂತರ್ಜಲ ನೀರು ಕಲುಷಿತಗೊಂಡಿದ್ದು ಮುಂದಿನ ಪೀಳಿಗೆಯ ಜನರಿಗೆ ಶುದ್ಧನೀರು ಸಿಗಬೇಕೆನ್ನುವ ಕಾರಣಕ್ಕೆ ಹೋರಾಟ ಮಾಡಲಾಗುತ್ತಿದೆ.ಇದೇ ವೇಳೆ ಕೆರೆಗಳಲ್ಲಿನ ಮೀನುಗಳ ಸಾವು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ, ಇಂದು ಮೀನುಗಳ ಸಾವು ನಂತರ ಮನುಷ್ಯ ಸಾವು ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ.
ಬಾಶೆಟ್ಟಿಹಳ್ಳಿಯ ಕೆಲವು ಕೈಗಾರಿಕೆಗಳ ಮಾಲೀಕರು ಮಳೆ ಬರುವುದನ್ನೇ ಕಾಯುತ್ತಾರೆ, ಅದಕ್ಕೆ ಕಾರಣ ಕೈಗಾರಿಕೆಗಳಲ್ಲಿನ ತ್ಯಾಜ್ಯ ನೀರು ಚರಂಡಿಗಳಿಗೆ ಹರಿಸಲು ಮಳೆ ಉತ್ತಮ ಅವಕಾಶ ಮಾಡಿಕೊಡುತ್ತದೆ, ಮಳೆಯಾಗುವುದನ್ನೇ ಕಾಯುವ ಅವರು, ಕೈಗಾರಿಕೆಗಳಲ್ಲಿನ ತ್ಯಾಜ್ಯ ನೀರನ್ನ ಮಳೆ ನೀರಿನೊಂದಿಗೆ ಚರಂಡಿಗಳಿಗೆ ಹರಿಸಿ ಬಿಡುತ್ತಾರೆ, ಮಳೆ ನೀರಿನ ಜೊತೆ ಬಂದ ಕೈಗಾರಿಕೆಗಳ ತ್ಯಾಜ್ಯ ನೀರಿನಿಂದಾಗಿ ಕೆರೆಯಲ್ಲಿನ ಮೀನುಗಳ ಸಾವಿಗೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪ.