ರಾಜಕಾಲುವೆ ಹಾಗೂ ಸಂಪರ್ಕ ರಸ್ತೆ ಒತ್ತುವರಿ… ಆಶ್ರಯ ಬಡಾವಣೆ ನಿವಾಸಿಗಳ ಆಕ್ರೋಶ
ದೊಡ್ಡಬಳ್ಳಾಪುರ :ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ರಾಜಕಾಲುವೆ ಹಾಗೂ 66 ಅಡಿಗಳ ಸಂಪರ್ಕ ರಸ್ತೆ ಒತ್ತುವರಿಯಾಗಿದೆ, ಮಳೆನೀರು ಹರಿದು ಹೋಗಲು ಇರುವ ರಾಜಕಾಲುವೆ ಮುಚ್ಚಿ ಕೆಲವರು ಲೇ ಔಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ, ಸರ್ಕಾರಿ ಸ್ಥಳವು ಒತ್ತುವರಿಯಾಗಿದ್ದು ಸದರಿ ಸ್ಥಳದ ಒತ್ತುವರಿಯನ್ನು ತೆರವು ಮಾಡುವ ಮೂಲಕ ಸಾರ್ವಜನಿಕರಿಗೆ ರಾಜಕಾಲುವೆ ಹಾಗೂ ರಸ್ತೆ ಉಳಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಜೆಡಿಎಸ್ ಮುಖಂಡರಾದ ಪ್ರವೀಣ್ ಕುಮಾರ್ ಮತನಾಡಿ ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ( ರಾಜೀವ್ ಗಾಂಧಿ ಬಡಾವಣೆ) ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಇದೀಗ ಹೊಸ ಸಮಸ್ಯೆಯೊಂದು ಸೇರಿಕೊಂಡಿದ್ದು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲಾಗಿದೆ. ನಗರದಿಂದ ರಾಜೀವ್ ಗಾಂಧಿ ಬಡವಾಣೆಗೆ ಸಂಪರ್ಕಿಸುವ ಹಳೇ ಮಧುಗಿರಿ ರಸ್ತೆಗೆ ಸಂಬಂಧಿಸಿದಂತೆ ನಕಾಶೆ ಹಾಗೂ ಸರ್ಕಾರಿ ದಾಖಲೆಗಳಲ್ಲಿ 66 ಆಡಿಗಳ ಅಗಲದ ರಸ್ತೆ ಇದ್ದು ಪ್ರಸ್ತುತ 20 ಆಡಿಗಳ ರಸ್ತೆ ಇದೆ ಇದಕ್ಕೆ ಮುಖ್ಯ ಕಾರಣ ರಸ್ತೆಯ ಎರಡು ಬದಿಗಳು ಒತ್ತುವರಿಯಾಗಿರುವುದು.
ಕಿರಿದಾದ ರಸ್ತೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಸಾವಿರಾರು ಜನರು ಸಂಚರಿಸುವ ರಸ್ತೆ ಇದಾಗಿದ್ದು, ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಬೇಕಿದೆ. ಹಾಗೂ ಇದೀಗ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ರಾಜಕಾಲುವೆಯನ್ನು ಮುಚ್ಚಿ ಲೇಔಟ್ ನಿರ್ಮಾಣಕ್ಕೆ ಕೆಲ ಪ್ರಭಾವಿಗಳು ಮುಂದಾಗಿದ್ದಾರೆ.ರಾಜಕಾಲುವೆಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ರಾಜಕಾಲುವೆ ಮುಚ್ಚುವ ಪ್ರಯತ್ನ ನಡೆಯುತ್ತಿದೆ ಇದರಿಂದ ಮಳೆನೀರು ಹರಿದು ಹೋಗದೆ ರಸ್ತೆಯಲ್ಲಿ ನಿಲ್ಲುತ್ತದೆ, ರಸ್ತೆಯಲ್ಲಿ ನೀರು ನಿಲ್ಲುವ ಕಾರಣ ರಾಜೀವ್ ಗಾಂಧಿ ಬಡಾವಣೆ ಸಂಪರ್ಕವೇ ಕಡಿತವಾಗಲಿದೆ ಎಂದರು.
ಈ ಕುರಿತು ಸ್ಥಳೀಯರಾದ ಶಿವಣ್ಣ ಮಾತನಾಡಿ ರಸ್ತೆ ವಿಚಾರವಾಗಿ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನೆಡೆಸುತ್ತಿದ್ದೇವೆ ಆದರೆ ಈವರೆಗೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ವಿಪರ್ಯಾಸ.ನಮಗೆ ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲ ಆದರೆ ಈಗ ಒತ್ತುವರಿ ಸಮಸ್ಯೆ ಜೊತೆಗೆ ರಾಜಕಾಲುವೆಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ರಾಜಕಾಲುವೆ ಮುಚ್ಚುವ ಹುನ್ನಾರ ನೆಡೆಯುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ . ನಮ್ಮ ಬಡಾವಣೆಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಈಗ ರಸ್ತೆ ಹಾಗೂ ರಾಜಕಾಲುವೆ ಕಸಿದುಕೊಳ್ಳುವ ಪ್ರಯತ್ನ ನೆಡೆಯುತ್ತಿದೆ ತಾಲ್ಲೂಕು ಆಡಳಿತ ಈ ಕುರಿತು ಗಮನಹರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದರು.
ಇಷ್ಟು ವರ್ಷಗಳು ಈ ರಾಜಕಾಲುವೆ ಮೂಲಕವೇ ಮಳೆನೀರು ಸರಾಗವಾಗಿ ಹರಿದು ಹೋಗುತ್ತಿತ್ತು, ಆದರೆ ಈಗ ಏಕಾಏಕಿ ರಾಜಕಾಲುವೆ ಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ, ಈಗಾಗಲೇ ಹಲವು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ಜನರು , ರಾಜಕಾಲುವೆ ಮುಚ್ಚಿದಲ್ಲಿ ಮಳೆನೀರು ರಸ್ತೆ ಮೇಲೆ ನಿಲ್ಲುವುದರಿಂದ ಮತ್ತಷ್ಟು ಸಮಸ್ಯೆ ಎದುರಿಸಲಿದ್ದಾರೆ. ಒತ್ತುವರಿ ಹಾಗೂ ರಾಜಕಾಲುವೆ ಸಮಸ್ಯೆಯನ್ನು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಬಗೆಹರಿಸಬೇಕಿದೆ ಮೂಲಭೂತ ಸೌಕರ್ಯಗಳನ್ನು ಪ್ರತಿಭಟಿಸಿ ಪಡೆಯುವ ಸಮಾಜದಲ್ಲಿ ನಾವಿದ್ದೇವೆ ಎಂಬುದು ನೋವಿನ ಸಂಗತಿ. ಈ ಸಮಸ್ಯೆಗಳನ್ನು ತಾಲ್ಲೂಕು ಹಾಗೂ ನಗರ ಸಭೆ ಆಡಳಿತ ತ್ವರಿತವಾಗಿ ಪರಿಹರಿಸಲಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಶಶಿಕುಮಾರ್ ಮಾತನಾಡಿ, ರಾಜೀವ್ ಗಾಂಧಿ ಬಡಾವಣೆ ನಿರ್ಮಾಣವಾಗಿ 20 ವರ್ಷ ಕಳೆದರು ಮೂಲಭೂತ ಸೌಕರ್ಯಗಳಿಂದ ನಾವು ವಂಚಿತರು, ನಮ್ಮ ಬಡಾವಣೆಗೆ ಮೂಲಭೂತ ಸೌಕರ್ಯ ಕೊಡಲು ಸ್ಥಳೀಯ ಆಡಳಿತ ವ್ಯವಸ್ಥೆ ಅಸಡ್ಡೆ ತೋರುತ್ತಿದೆ , ಈ ಕುರಿತು ಧ್ವನಿಯಾಗಬೇಕಿರುವ ಸ್ಥಳೀಯ ವಾರ್ಡ್ ಸದಸ್ಯರು ಸುಮ್ಮನಿರುವುದು ಬೇಸರತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.