ದೊಡ್ಡಬಳ್ಳಾಪುರ : ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಅಂಗನವಾಡಿಗಳಿಗೆ ಅಗತ್ಯ ಪರಿಕರಗಳ ವಿತರಣೆ

ದೊಡ್ಡಬಳ್ಳಾಪುರ:ಕೇಂದ್ರ ಪುರಸ್ಕೃತ ಪೋಷಣ್ ಅಭಿಯಾನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ಫೋನ್ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಬೆಳವಣಿಗೆಗೆ ಅವಶ್ಯಕವಿರುವ ಅಗತ್ಯ ಪರಿಕರಗಳ ವಿತರಣೆ ಮಾಡಲಾಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹಕಾರದೊಂದಿಗೆ ದೊಡ್ಡಬಳ್ಳಾಪುರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಅಂಗನವಾಡಿಗಳಲ್ಲಿ ಮಾಂಟೆಸ್ಸರಿ ರೀತಿಯ ಶಿಕ್ಷಣ ಪದ್ಧತಿ ಅಳವಡಿಕೆ ಆಗಬೇಕಿದೆ. ಅಂಗನವಾಡಿಗಳು ಮಗುವಿನ ಕಲಿಕೆಗೆ ಪ್ರಥಮ ಮೆಟ್ಟಿಲಾಗಿ ಶ್ರಮಿಸಬೇಕಿದೆ. ಖಾಸಗಿ ಶಾಲೆಗಳಲ್ಲಿ ನೀಡುವ ಮಾಂಟೆಸ್ಸರಿ ಶಿಕ್ಷಣ ನಮ್ಮ ಅಂಗನವಾಡಿಗಳಲ್ಲಿ ಉಚಿತವಾಗಿ ಬಡ ಮಕ್ಕಳಿಗೆ ನೀಡಬೇಕು ಎಂಬುದು ನನ್ನ ಆಶಯ.. ಈ ಕುರಿತಂತೆ ತಾಲ್ಲೂಕಿನ ಶಾಸಕನಾಗಿ ನನ್ನ ಸಹಕಾರ ಸದಾ ಇರುತ್ತದೆ. ಕ್ಲಸ್ಟರ್ ಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಕೇಂದ್ರಗಳ ಕುಂದುಕೊರತೆಗಳನ್ನು ಸರಿಪಡಿಸಲಾಗುವುದು ಎಂದರು.

ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮ ಹಾಗೂ ಆರೋಗ್ಯಕರ ವಾತಾವರಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಬಳಸಬೇಕಿದೆ. ಮಕ್ಕಳಿಗೆ ಪೋಷಣೆಯುಕ್ತ ಆಹಾರ ಹಾಗೂ ಉತ್ತಮ ಕಲಿಕಾ ವಾತಾವರಣ ನೀಡುವ ಮೂಲಕ ಮಕ್ಕಳ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಿದರು.

ಸಂಕೇತಿಕವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಅಂಗನವಾಡಿಗಳಿಗೆ ಅಗತ್ಯ ಪರಿಕರಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ವೆಂಕಟೇಶ್ ( ಬಂತಿ ),ಪದ್ಮನಾಭ್, ಕೃಷ್ಣಪ್ಪ, ಸಿ ಡಿ ಪಿ ಓ ರವಿಕುಮಾರ್,ಎಸಿಡಿಪಿಓ
ಅರುಣ್ ಕುಮಾರ್ ಮತ್ತು ರೂಪಶ್ರೀ ಮೇಲ್ವಿಚಾರಕರು ತಾಲೂಕು ಸಂಯೋಜಕರು ಸೇರಿದಂತೆ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.