ಖಾಸಗಿಯವರ ಪಾಲಾದ ಕೊನಘಟ್ಟ ಗ್ರಾಮ ಪಂಚಾಯ್ತಿ ಜಾಗ—- ಗ್ರಾಮಸ್ಥರ ಆಕ್ರೋಶ
ದೊಡ್ಡಬಳ್ಳಾಪುರ :ನಿವೇಶನಗಳ ಖಾತೆ ಮಾಡುವ ಅಧಿಕಾರ ಗ್ರಾಮ ಪಂಚಾಯಿತಿ ಇದೆ, ಇಂತಹ ಪಂಚಾಯಿತಿ ಕಟ್ಟಡದ ಜಾಗವೇ ಖಾಸಗಿ ವ್ಯಕ್ತಿಗೆ ಖಾತೆಯಾಗಿದೆ, ಸದ್ಯ ಕೊನಘಟ್ಟ ಗ್ರಾಮ ಪಂಚಾಯಿತಿ ಜಾಗ ಬೇರೆಯವರ ಹೆಸರಲ್ಲಿದ್ದು, ಪಂಚಾಯಿತಿ ಕಟ್ಟಡದ ಮಾಲೀಕತ್ವದ ಖಾಸಗಿ ವ್ಯಕ್ತಿಯ ಪಾಲಾಗಿದೆ, ಪಂಚಾಯಿತಿ ಕಟ್ಟಡದ ಜಾಗವನ್ನ ಉಳಿಸಿಕೊಳ್ಳಲು ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕೊನಘಟ್ಟ ಗ್ರಾಮ ಪಂಚಾಯಿತಿ ಕಟ್ಟಡ ಈಗ ತ್ರಿಶಂಕು ಸ್ಥಿತಿಯಲ್ಲಿದೆ, ಕೊನಘಟ್ಟ ಗ್ರಾಮದ ಸರ್ವೆ ನಂಬರ್ 351/2 ಹಾಗೂ 351/3ರ ಒಟ್ಟು 4 ಗುಂಟೆ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವಿದೆ, ಕಳೆದ 40 ವರ್ಷಗಳಿಂದ ಇದೇ ಜಾಗದಲ್ಲಿ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ, ಗ್ರಾಮ ಪಂಚಾಯಿತಿ ಹೆಸರಲ್ಲಿ 11 ಬಿ ಇ ಖಾತೆಯನ್ನ ಹೊಂದಿದೆ. ಆದರೆ ಇದಕ್ಕಿದಂತೆ 20 ದಿನಗಳ ಹಿಂದೆ ಪಂಚಾಯಿತಿ ಜಾಗ ಬೇರೆಯವರ ಹೆಸರಿಗೆ ಪೌವತಿ ಖಾತೆಯಾಗಿದೆ, ಸರ್ವೆ ನಂಬರ್ 351/2 ವೆಂಕಟಪ್ಪ ಮತ್ತು 351/3 ಸಾನಂದ ಎಂಬ ವ್ಯಕ್ತಿಗಳ ಹೆಸರಿಗೆ ಖಾತೆಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಜಾಗವನ್ನ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆಯಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಇಂದು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜಮಾಯಿಸಿದ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು, ಇದೇ ವೇಳೆ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್, ಗ್ರಾಮ ಪಂಚಾಯಿತಿ ಜಾಗ ಬೇರೆಯವರಿಗೆ ಖಾತೆಯಾಗಿರುವುದು ತಿಳಿದ ತಕ್ಷಣವೇ ತುರ್ತು ಸಭೆಯನ್ನ ಕರೆಯಲಾಗಿತು, ಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಖಾತೆ ಬದಲಾವಣೆಯ ಬಗ್ಗೆ ಯಾವುದೇ ಉತ್ತರ ನೀಡಿಲ್ಲ, ಸಭೆಯ ನಡುವೆ ಎದ್ದು ಹೋದರು, ಬೆಳವಣಿಗೆಗಳನ್ನ ಗಮನಿಸಿದ್ದಾಗ ಖಾತೆ ಬದಲಾವಣೆಯ ಹಿಂದೆ ಇವರು ಶಾಮೀಲಾಗಿರುವ ಸಂಶಯ ಇದೆ ಎಂದರು.
ಗ್ರಾಮದ ಮುಖಂಡರಾದ ಕೃಷ್ಣಪ್ಪ ಮಾತನಾಡಿ, ಖಾತೆ ಬದಲಾಣೆ ಮಾಡುವಾಗ ಕಂದಾಯ ಅಧಿಕಾರಿಗಳ ಸ್ಥಳಕ್ಕೆ ಬಂದು ಮಹಜರ್ ಮಾಡಿ ಅನಂತರ ಖಾತೆ ಬದಲಾವಣೆ ಮಾಡಬೇಕು, ಆದರೆ ರೆವೆನ್ಸೂ ಇನ್ಸ್ ಪೇಕ್ಟರ್ ಆಗಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಖಾತೆ ಬದಲಾವಣೆ ಮಾಡಿದ್ದಾರೆ, ಗ್ರಾಮ ಪಂಚಾಯಿತಿ ಕಟ್ಟಡ ಜಾಗದ ಖಾತೆಯನ್ನು ಬದಲಾವಣೆ ಮಾಡುವಾಗಲು ಅಧಿಕಾರಿಗಳು ಅವರ ಸಾಮಾನ್ಯ ಜ್ಞಾನ ಬಳಸದೆ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು.
ಗ್ರಾಮ ಪಂಚಾಯಿತ ಜಾಗದ ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೊನಘಟ್ಟ ಪಿಡಿಓ ರಶ್ಮಿ, ಸರ್ವೆ ನಂಬರ್ 351/1 ಮತ್ತು 351/3 ಎರಡರ ಜಾಗದ ಖಾತೆ ಬದಲಾವಣೆ ಮಾಡುವಾಗ ಅಧಿಕಾರಿಗಳಿಂದ ಸ್ಥಳ ಪರಿಶೀಲನೆಯಾಗಿಲ್ಲ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ ಹಾಗೂ ನೋಟಿಸ್ ಸಹ ನೀಡಿರುವುದಿಲ್ಲ, ಯಾವ ದಾಖಲೆಗಳ ಮೇಲೆ ಖಾತೆ ಬದಲಾವಣೆ ಮಾಡಲಾಗಿದೆ ಮತ್ತು ಗ್ರಾಮ ಪಂಚಾಯಿತಿ ಹೆಸರಿಗೆ ಮತ್ತೆ ಪಹಣಿ ಮತ್ತು ಖಾತೆ ಮಾಡಿಕೊಡುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲರಾಜ್, ಗ್ರಾಮಸ್ಥರಾದ ಪುನೀತ್ ಕುಮಾರ್,ನಾಗೇಶ್, ನಂಜೇಗೌಡ, ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಗ್ರಾಮಸ್ಥರು ಇದ್ದರು.