ಜಿಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ಜೈ ಬೀಮ್ ಸೇನೆ ಪ್ರತಿಭಟನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಜಿಲ್ಲೆ ಹಾಗೂ ತಾಲ್ಲೂಕಿನ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಅಗ್ರಹಿಸಿ ಕರ್ನಾಟಕ ಭೀಮ್ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನೆಡೆಸಲಾಯಿತು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಜೈ ಭೀಮ್ ಮಂಜುನಾಥ್ ನೇತೃತ್ವದಲ್ಲಿ ನಡೆದ ಜಿಲ್ಲಾಪ್ರತಿಭಟನೆಯಲ್ಲಿ ತಾಲೂಕಿನ ಹಲವು ಸಮಸ್ಯೆಗಳನ್ನು ಒಳಗೊಂಡಂತೆ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯ ಐಯ್ಯಮ್ಮನಹಳ್ಳಿ,ದುರ್ಗೇನಹಳ್ಳಿಯಲ್ಲಿ ಮತ್ತು ನೆಲ್ಲುಗುದಿಗೆ ಗ್ರಾಮಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ್ ಸೇನೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ ಮಾತನಾಡಿ ಅಧಿಕಾರಕ್ಕೆ ಬರುವ ಮುನ್ನ ದಲಿತ ಪರ ದಲಿತರ ಧ್ವನಿಯಾಗಿ ಶ್ರಮಿಸುತ್ತೇವೆ ಎಂದು ವಾಗ್ದಾನ ಮಾಡುವ ಸರ್ಕಾರಗಳು ಅಧಿಕಾರಕ್ಕೆ ಬಂದ ಕೂಡಲೇ ಸಂಪೂರ್ಣ ದಲಿತ ವಿರೋಧಿ ಕಾರ್ಯಗಳನ್ನು ಮಾಡಲು ಮುಂದಾಗುವುದು ವಿಪರ್ಯಾಸವೇ ಸರಿ. ಬಿಜೆಪಿಯ ದಲಿತ ವಿರೋಧಿ ನೀತಿಯಿಂದ ಬೇಸತ್ತಿದ್ದ ಜನತೆ ಕಾಂಗ್ರೆಸ್ ಗೆ ಒಂದು ಅವಕಾಶ ಕೊಟ್ಟರು ಆದರೆ ಕಾಂಗ್ರೆಸ್ ದಲಿತರ ಧ್ವನಿಯಾಗಿ ಶ್ರಮಿಸುವುದು ಬಿಟ್ಟು ದಲಿತ ವಿರೋಧಿ ಆಡಳಿತವನ್ನು ನಡೆಸುತ್ತಿದೆ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನಗಳು ಹೆಚ್ಚಾಗುತ್ತಿವೆ. ಸರ್ಕಾರಿ ಜಾಗಗಳು ಕಬಳಿಸಲಾಗುತ್ತಿದೆ. ಈ ಕುರಿತು ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಭೀಮ್ ಸೇನೆ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು .
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಕಷ್ಟು ಸಮಸ್ಯೆಯಿದ್ದು ಇಂದು ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಸ್ಥಳೀಯ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ ಎಂದರು.
ಸಂಘಟನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಜೈ ಭೀಮ್ ಮಂಜುನಾಥ್ ಮಾತನಾಡಿ ತಾಲ್ಲೂಕಿನ ಐಯ್ಯಮ್ಮನಹಳ್ಳಿಯಲ್ಲಿ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಕೊರತೆಯಿದ್ದು ಮಕ್ಕಳ ಪ್ರಾಥಮಿಕ ಬೆಳವಣಿಗೆಗೆ ಸಹಕಾರಿಯಾಗುವ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಲು ಮನವಿ ಮಾಡಿದರು.
ಗ್ರಾಮದ ಸ್ಥಳೀಯ ನಾಗರಿಕರಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಹಾಗೂ ರಸ್ತೆ, ಚರಂಡಿಗಳ ವ್ಯವಸ್ಥೆ ಬೀದಿ ದೀಪಗಳ ಕೊರತೆ ಇದ್ದು ಸರಿಪಡಿಸುವಂತೆ ಕೋರಿದರು.
ತಾಲೂಕಿನ ಗ್ರಾಮಗಳಲ್ಲಿ ಸ್ಮಶಾನಗಳ ಕೊರತೆ ತಾಂಡವವಾಡುತ್ತಿದ್ದು ಐಯಮ್ಮನಹಳ್ಳಿ, ದುರ್ಗೆನಹಳ್ಳಿ,ನೆಲ್ಲುಗುದ್ದಿಗೆ ಗ್ರಾಮಗಳಲ್ಲಿ ಸ್ಮಶಾನದ ಕೊರತೆ ಇದ್ದು ಪ್ರಸ್ತುತ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಸತ್ತ ವ್ಯಕ್ತಿಯನ್ನು ಮಣ್ಣು ಮಾಡಲು ಪರದಾಡುವಂತೆ ಆಗಿದೆ ಸದರಿ ಗ್ರಾಮಗಳಿಗೆ ಸ್ಮಶಾಣಕ್ಕಾಗಿ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ದುರ್ಗೆನಹಳ್ಳಿ, ಮತ್ತು ನೆಲ್ಲುಗುದಿಗೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಿಂದುಳಿದವರು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮೇಲ್ಮಾತಿ ಬಡವರು ಒಂದೊಂದು ಸಣ್ಣ ಮನೆಗಳಲ್ಲಿ 2-3 ಕುಟುಂಬಗಳು ವಾಸವಾಗಿರುತ್ತಾರೆ. ಇವರು ಪರ್ಯಾಯವಾಗಿ ಮನೆಗಳನ್ನು ಕಟ್ಟಿಕೊಳ್ಳಲು ನಿವೇಶನಗಳಿರುವುದಿಲ್ಲ. ಈ ಹಿನ್ನೆಲೆಯಲ್ಲಿ ದುರ್ಗೆನಹಳ್ಳಿ ಹಾಗೂ ನೆಲುಗುದಿಗೆ ಎರಡು ಗ್ರಾಮಗಳ ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ಸ್ಥಳವನ್ನು ಗುರುತಿಸಿ ಬಡ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಮನವಿ ಮಾಡಿದರು.
ದಿವಂಗತ ಶ್ರೀಯುತ ಪರಶುರಾಮ್ .ಪಿ.ಎಸ್.ಐ ಸಾವಿನ ಪ್ರಕರಣವನ್ನು ಸಿ.ಐ.ಡಿ ಗೆ ಬದಲಾಗಿ ಸಿ.ಬಿ.ಐ ತನಿಖೆಗೆ ವಹಿಸುವಂತೆ ಒತ್ತಾಯ*
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಪಿ ಎಸ್ ಐ ಪರಶುರಾಮ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದು.ಕಾರಣರಾದವರನ್ನು ಈ ಕೂಡಲೇ ಬಂಧಿಸಿ ತನಿಖೆ ನಡೆಸುವಂತೆ ಹಾಗೂ ಪರಶುರಾಮ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಮೃತ ಪರಶುರಾಮ್ ಅವರ ಮಡದಿಯ ವಿದ್ಯಾರ್ಹತೆಗೆ ತಕ್ಕಂತೆ ಹುದ್ದೆಯನ್ನು ನೀಡಬೇಕೆಂದು ಕರ್ನಾಟಕ ಭೀಮ್ ಸೇನೆ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರು ಗುರುಪ್ರಸಾದ್, ಬೆಂಗಳೂರು ಕಾರ್ಯದರ್ಶಿ ರಮೇಶ್,ಮದುಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ದಾಳಪ್ಪ, ನೆಲಮಂಗಲ ತಾಲ್ಲೂಕುಅಧ್ಯಕ್ಷ ಕುಮಾರ್ ಸೇರಿದಂತೆ ಜಿಲ್ಲೆಯ ಹಲವು ದಲಿತ ಮುಖಂಡರು,ಪ್ರಗತಿಪರ ಚಿಂತಕರು, ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.