ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ ಆರೋಪ : ರಕ್ಷಣೆ ನೀಡುವಂತೆ ಕೋರಿ ಡಿವೈಎಸ್ಪಿ ಕಚೇರಿ ಮುಂದೆ ಧರಣಿ ಕುಳಿತ ರೈತ ಕುಟುಂಬ

ದೊಡ್ಡಬಳ್ಳಾಪುರ : ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ದಲಿತ ಮಹಿಳೆ‌ ಮುನಿನಾರಾಯಣಮ್ಮ ಅವರಿಗೆ ಸೇರಿದ 5ಎಕ್ಕರೆ 3ಗುಂಟೆ ಜಾಗವನ್ನು ಪ್ರಭಾವಿಗಳು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದು , ಸದರಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಡಿವೈಎಸ್ಪಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಲಾಯಿತು.

ನಗರದ ಡಾ.ಬಿಆರ್.ಅಂಬೇಡ್ಕರ್ ವೃತ್ತ(ಪ್ರವಾಸಿ ಮಂದಿರ)ದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಸ್ಥಳಕ್ಕೆ ಡಿವೈಎಸ್ಪಿ ಬರುವವರೆಗೂ ಧರಣಿ ಮುಂದುವರಿಸುವುದಾಗಿ ಪಟ್ಟುಹಿಡಿದರು.

ಏನಿದು ಸಮಸ್ಯೆ…??

ತಾಲೂಕಿನ ಹೆಗ್ಗಡಿಹಳ್ಳಿಯ ಸರ್ವೆ ನಂಬರ್ 102ರಲ್ಲಿ ಮುನಿನಾರಾಯಣಮ್ಮ ಅವರಿಗೆ ಪಿತ್ರಾರ್ಜಿತವಾದ ಆಸ್ತಿ ಕೋರ್ಟ್ ಆದೇಶದ ಮೂಲಕ 5 ಎಕರೆ 3 ಗುಂಟೆ ಭೂಮಿ ಡಿಕ್ರಿ ಆಗಿದೆ ಎಂದು,ಜಮೀನಿಗೆ ಸಂಬಂಧಿಸಿ‌ದ ಎಫ್‌ಡಿಪಿ ಪ್ರಕರಣ ನ್ಯಾಯಾಲಯದಲ್ಲಿದ್ದರೂ ವಿಕ್ರಂ ಮತ್ತು ಅವರ ಸಹಚರರು ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ

ಣಿವೇಪುರದ ದಿವಗಂತ ಮುನಿಯಪ್ಪನವರ ಮೊದಲ ಹೆಂಡತಿ ಚಿಕ್ಕತಿಮ್ಮಕ್ಕನವರ ಒಬ್ಬಳೇ ಮಗಳು ಮುನಿನಾರಾಯಣಮ್ಮ. ಅವರ ತಂದೆ ಮುನಿಯಪ್ಪನವರಿಗೆ ಒಟ್ಟು 9 ಎಕರೆ 17 ಗುಂಟೆ ಜಮೀನಿದ್ದು, 2011ರಲ್ಲಿ ದೊಡ್ಡಬಳ್ಳಾಪುರದ ನ್ಯಾಯಾಲಯದಲ್ಲಿ ಭಾಗಾಂಶದ ಕೇಸ್ ಹಾಕಲಾಗಿತ್ತು. ಕೋರ್ಟ್ ಆದೇಶದಂತೆ ಮುನಿನಾರಾಯಣಮ್ಮ ಅವರಿಗೆ 5 ಎಕರೆ 3 ಗುಂಟೆ ಜಮೀನು ನೀಡಲಾಗಿದೆ. ಸರ್ವೇ ನಡೆಸಿ ಜಾಗವನ್ನು ಗುರುತಿಸುವ ಕಾರಣಕ್ಕೆ ಕೋರ್ಟ್ ನಲ್ಲಿ ಎಫ್‌ಡಿಪಿ ಕೇಸ್ ಸಹ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಸೂಕ್ತ‌ ರಕ್ಷಣೆ ನೀಡುವಂತೆ ಕೋರಿ ನಗರ ಠಾಣೆ ಇನ್ಸ್ಪೆಕ್ಟರ್ ಎ.ಅಮರೇಶ್ ಗೌಡ ಅವರಿಗೆ ಜಮೀನಿನ ವಾರಸುದಾರರು ಹಾಗೂ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.

ಇನ್ಸ್ಪೆಕ್ಟರ್ ಅಮರೇಶ್ ಗೌಡ ಮನವಿ ಸ್ವೀಕರಿಸಿ ಮಾತನಾಡಿದರು ಈ ಪ್ರಕರಣ ಈಗ ಪೊಲೀಸ್ ಗಮನಕ್ಕೆ ಬಂದಿದೆ. ಇದನ್ನು ಡಿವೈಎಸ್‌ಪಿ ಅವರ ಗಮನಕ್ಕೆ ತಂದು, ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಭಾರತೀಯ ಶೂದ್ರಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿದ್ದರಾಜು ಮಣೆಗಾರ, ಮುಖಂಡರಾದ ದೊಡ್ಡಯ್ಯ, ಚನ್ನಿಗರಾಯಪ್ಪ ಮತ್ತಿತರರು ಭಾಗವಹಿಸಿದ್ದರು.